ಐಗೂರು, ಜ. ೧೮: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಜೊತೆ ಸಾಕು ನಾಯಿಗಳಿಂದಲೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಯದ ನೆರಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದಾಗಿ ಮಕ್ಕಳ ಗ್ರಾಮಸಭೆಯಲ್ಲಿ ಆರೋಪಗಳು ಕೇಳಿಬಂದವು.
ಯಡವಾರೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳು ಹಾಗೂ ಅವರುಗಳ ಪೋಷಕರು, ಕೆಲವರು ಸಾಕು ನಾಯಿಗಳನ್ನು ಮನೆಯಲ್ಲಿ ಕಟ್ಟಿ ಹಾಕಿ ಆರೈಕೆ ಮಾಡದೆ ಬೀದಿಗೆ ಬಿಡುತ್ತಿದ್ದು ಶಾಲಾ ವಿದ್ಯಾರ್ಥಿಗಳನ್ನು ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತಿವೆ ಎಂಬುದಾಗಿ ತಮ್ಮ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.
ನಾಯಿಗಳು ಕಚ್ಚುತ್ತವೋ ಅಥವಾ ಸುಮ್ಮನಿರುತ್ತವೋ ಎಂಬುದರ ಬಗ್ಗೆ ಅವುಗಳ ಮನಸ್ಸನ್ನು ಅರಿಯಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಮಕ್ಕಳ ಗ್ರಾಮ ಸಭೆಯಲ್ಲಿ ಆರೋಪಿಸಿದರು.
ಸಾಕು ನಾಯಿಗಳು ಮತ್ತು ಬೀದಿನಾಯಿಗಳ ಹಾವಳಿಯ ಸಮಸ್ಯೆ ಸರಿಪಡಿಸಬೇಕೆಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣ ಕುಮಾರ್ ಮಾತನಾಡಿ, ಸಾಕು ನಾಯಿಗಳನ್ನು ಮನೆಯಲ್ಲಿ ಕಟ್ಟಿ ಹಾಕದೆ ಬೀದಿಗೆ ಬಿಡುತ್ತಿರುವ ನಾಯಿಗಳ ಮಾಲೀಕರ ಹೆಸರನ್ನು ಸೂಚಿಸಿದರೆ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.