ಸಿದ್ದಾಪುರ, ಜ. ೧೮: ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರಿನ ರತ್ನಪುರಿ ನಿವಾಸಿ ಜಾಹಿದ್ ಅಹ್ಮದ್ (೪೭) ಬಂಧಿತ ಆರೋಪಿ. ಆಲ್ಟೊ ೮೦೦ ಕಾರಿನಲ್ಲಿ (ಕೆ.ಎ.೦೨-ಎಂ.ಎ. ೭೭೪೭) ಗೋಮಾಂಸವನ್ನು ತುಂಬಿಸಿ ಕೊಂಡು ಗೋಣಿಕೊಪ್ಪಲಿನಿಂದ ವೀರಾಜಪೇಟೆ ಕಡೆಗೆ ಬರುತ್ತಿದ್ದ ಸಂದರ್ಭ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕಾರನ್ನು ತಪಾಸಣೆ ಮಾಡಿದ ಸಂದರ್ಭ ಕಾರಿನಲ್ಲಿ ೧೫೦ ಕೆ.ಜಿ. ಗೋಮಾಂಸ ಪತ್ತೆಯಾಗಿದೆ.

ವಿಚಾರಣೆ ನಡೆಸಿದಾಗ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ವೀರಾಜಪೇಟೆ ಭಾಗಕ್ಕೆ ತರುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹುಣಸೂರಿನ ರತ್ನಪುರಿಯಿಂದ ಮಾಂಸವನ್ನು ತರಲಾಗಿದೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋಮಾಂಸ ಸಾಗಾಟಕ್ಕೆ ಬಳಸಿದ ಕಾರನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.