ನಾಪೋಕ್ಲು, ಜ. ೧೮: ಇಲ್ಲಿಗೆ ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ “ಅಡಿಚಿಜಿಣ ಚಿ ಖesume ಖಿhಚಿಣ ಒಚಿಞes ಚಿಟಿ Imಠಿಚಿಛಿಣ” ವಿಷಯಾಧಾರಿತ ಪ್ರೇರಣಾತ್ಮಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಓಜಸ್ವಿ ಫೌಂಡೇಶನ್ ಟ್ರಸ್ಟಿ ಹಾಗೂ ಜಸ್ಟ್ ರೊಬಾಟಿಕ್ಸ್ (ಬೆಂಗಳೂರು) ಸಂಸ್ಥೆಯ ಸಿಇಓ ಬ್ರಿಜೇಶ್ ಸಿ.ಎ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ‘ರೆಸ್ಯೂಮ್’ ತಯಾರಿಕೆ ಮತ್ತು ವೃತ್ತಿಜೀವನದ ಅಗತ್ಯ ಕೌಶಲ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ದೇವಕಿ ಪಿ.ಎಂ ಅವರು ಮಾತನಾಡಿ, ದಾನಿಗಳ ಸಹಕಾರ ಹಾಗೂ ಓಜಸ್ವಿ ಫೌಂಡೇಶನ್ ಶಿಕ್ಷಣಾಭಿವೃದ್ಧಿ ಉಪಕ್ರಮಗಳನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ತಮ್ಮ ಕೌಶಲ್ಯಗಳನ್ನು ವಿಸ್ತರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಕೊಡಗು ಗೌಡ ಸಮಾಜ, ಬೆಂಗಳೂರು ಪ್ರಾಯೋಜಕತ್ವ ವಹಿಸಿತ್ತು. ವಿದ್ಯಾರ್ಥಿಗಳ ವೃತ್ತಿ ನಿರ್ಮಾಣಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ನಡೆದ ಈ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

ಓಜಸ್ವಿ ಫೌಂಡೇಶನಿನ ಟ್ರಸ್ಟಿ ಡಾ. ಕವಿತಾ ಪಿ.ಸಿ. ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಜೊತೆಗೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳು ಮತ್ತು ಸಂಸ್ಥೆಯ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.ಗ್ರಾಮೀಣ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ ಮತ್ತು ವೃತ್ತಿ ಮಾರ್ಗದರ್ಶನಕ್ಕೆ ಬದ್ಧವಾಗಿರುವ ಓಜಸ್ವಿ ಫೌಂಡೇಶನ್, ಮುಂದಿನ ದಿನಗಳಲ್ಲಿಯೂ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದಾಗಿ ತಿಳಿಸಿದರು.