ವೀರಾಜಪೇಟೆ, ಜ. ೧೮: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕೇರಳ ರಾಜ್ಯಕ್ಕೆ ತೆರಳುವ ಮುಖ್ಯ ರಸ್ತೆಯ ವಿವಿಧ ಭಾಗಗಳಲ್ಲಿ ಭೂಮಿಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ನೆರವೇರಿಸಿದರು.

ಮಾಕುಟ್ಟ ಚೆಕ್‌ಪೋಸ್ಟ್, ವಾಟೆಕೊಲ್ಲಿ ಹಾಗೂ ಪೆರುಂಬಾಡಿ ಬಳಿ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು, ವಾಹನ ದಟ್ಟಣೆ ಹೆಚ್ಚಾಗಿ ಇರುವ ಈ ರಸ್ತೆಯ ಅಭಿವೃದ್ಧಿ ತನ್ನ ಪ್ರಥಮ ಆದ್ಯತೆಯಾಗಿದ್ದು, ಕಳೆದ ವರ್ಷದ ತೀವ್ರ ಮಳೆಯಿಂದ ಈ ರಸ್ತೆ ಹಾನಿಗೀಡಾಗಿದ್ದನ್ನು ಪರಿಗಣಿಸಿ, ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಒಟ್ಟು ರೂ.೨೫ ಕೋಟಿ ಅನುದಾನದ ಈ ಕಾಮಗಾರಿ ಪೈಕಿ, ರೂ.೨ ಕೋಟಿ ೮೦ ಲಕ್ಷದ ಮುಕ್ತಾಯಗೊಂಡ ಕಾಮಗಾರಿಯ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮಾಜಿ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಮಾಜಿ ಸದಸ್ಯರುಗಳಾದ ರಾಜೇಶ್ ಪದ್ಮನಾಭ, ರಾಫಿ, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಮತೀನ್, ಅತಿಫ್ ಮನ್ನ, ರಜಿನಿಕಾಂತ್, ಪೃಥ್ವಿನಾಥ್, ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಲಿಲ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ್, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಪಕ್ಷದ ಪ್ರಮುಖರು, ಆರ್ಜಿ ಪಂಚಾಯಿತಿ ಅಧ್ಯಕ್ಷರಾದ ಫಾತಿಮಾ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್, ಯುವ ಬ್ಲಾಕ್ ಅಧ್ಯಕ್ಷ ಶಬೀರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ಥಳೀಯ ಪ್ರಮುಖರು ಹಾಜರಿದ್ದರು.