ಮಡಿಕೇರಿ, ಜ. ೧೯: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಈ ಬಾರಿ ತಾ. ೨೪ ರಿಂದ ೨೬ರ ತನಕ ನಡೆಯಲಿದ್ದು, ಭಾಗಮಂಡಲದಲ್ಲಿರುವ ಭಗಂಡೇಶ್ವರ ಸನ್ನಿಧಿ ಬಣ್ಣಬಣ್ಣದ ಹೂಗಳಿಂದ ಸಿದ್ಧಗೊಳ್ಳಲಿದೆ. ಇದು ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿದೆ.

ಫಲಪುಷ್ಪ ಪ್ರದರ್ಶನ ಕುರಿತು ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಭಗಂಡೇಶ್ವರ ದೇವಾಲಯ ಕಲಾಕೃತಿಯು ೧೮ ಅಡಿ ಎತ್ತರ, ೨೩ ಅಡಿ ಅಗಲವಿರಲಿದೆ. ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂಗಳಿಂದ ಇದು ನಿರ್ಮಾಣವಾಗುತ್ತದೆ. ಭಾರತ ಏಕೀಕರಣದ ಸಂಕೇತವಾಗಿ ಕನ್ನಡದ ಅಕ್ಷರಗಳು ಸೇರಿದಂತೆ ಸಂಗೀತ ವಾದ್ಯಗಳು, ಗಣರಾಜ್ಯೋತ್ಸವ ಅಂಗವಾಗಿ ೮ ಅಡಿ ಎತ್ತರದಲ್ಲಿ ಅಮರ್ ಜವಾನ್, ಹಾರುವ ಹಕ್ಕಿ, ಮೀನು, ಚಿಟ್ಟೆ ಸೇರಿದಂತೆ ವಿವಿಧ ರೀತಿಯ ವಿಶೇಷ ಕಲಾಕೃತಿಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಆಕರ್ಷಣಿಯ ಫೋಟೋ ಪಾಯಿಂಟ್‌ಗಳನ್ನು ಕೂಡ ಹೂವಿನಿಂದ ತಯಾರು ಮಾಡಲಾಗುವುದು. ಇದರೊಂದಿಗೆ ತರಕಾರಿ, ಹಣ್ಣುಗಳಲ್ಲಿ ಕಲಾಕೃತಿಗಳ ಕೆತ್ತನೆ ಪ್ರದರ್ಶನ, ಬೋನ್ಸಾಯ್ ಗಿಡಗಳ ಪ್ರದರ್ಶನ, ಗಿಡಗಳ ಮಾರಾಟ ಇರಲಿದೆ. ಮಕ್ಕಳು, ಮಹಿಳೆಯರಿಗಾಗಿ ಒಣ ಹೂಗಳ ಜೋಡಣೆ, ಇಕೆಬಾನಾ, ರಂಗೋಲಿ ಸ್ಪರ್ಧೆ, ಬೋನ್ಸಾಯ್ ಗಿಡಗಳ ಜೋಡಣೆ ಸ್ಪರ್ಧೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ರೂ. ೩೧ ಲಕ್ಷ ವೆಚ್ಚ

ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕೆ ಇಲಾಖೆ ಹಾಗೂ ರಾಜಾಸೀಟ್ ಅಭಿವೃದ್ಧಿ ಸಮಿತಿ ವತಿಯಿಂದ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು ರೂ. ೩೧ ಲಕ್ಷ ವೆಚ್ಚವಾಗಲಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ ತಿಳಿಸಿದರು.

ತಾ. ೨೪ ರಂದು ಮಧ್ಯಾಹ್ನ ೩ ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಲಿದೆ. ರಾಜಾಸೀಟ್ ಉದ್ಯಾನವನದಲ್ಲಿ ಸುಮಾರು ೮ ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂಗಳು ಹಾಗೂ ಸುಮಾರು ೨೦ ಸಾವಿರ ವಿವಿಧ ಜಾತಿಯ ಹೂಗಳ ಪ್ರದರ್ಶನ ಇರಲಿದೆ. ಕಲಾಕೃತಿಗಳಿಗೆ ೮ ರಿಂದ ೧೦ ಲಕ್ಷ ಸೇವಂತಿ, ಆರ್ಕಿಡ್, ಡೆಸ್ಸಿ ಸೇರಿದಂತೆ ವಿವಿಧ ಹೂಗಳನ್ನು ಬಳಸಲಾಗುವುದು ಎಂದರು.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡುವಂತೆ ಶಿಕ್ಷಣ ಇಲಾಖೆಗೂ ಸೂಚಿಸಲಾಗಿದೆ ಎಂದು ಹೇಳಿದರು.

೬೦ ಮಳಿಗೆಗಳು

ಗಾಂಧಿ ಮೈದಾನದಲ್ಲಿ ೬೦ ವಿವಿಧ ರೀತಿಯ ಮಳಿಗೆಗಳನ್ನು ತೆರೆಯಲಾಗುವುದು. ವಿವಿಧ ಇಲಾಖೆ, ಏಜೆನ್ಸಿ,, ಸಂಸ್ಥೆಗಳ ಮಳಿಗೆ ಒಳಗೊಂಡಿರುತ್ತದೆ. ಈ ಪೈಕಿ ೧೦ ಮಳಿಗೆ ತೋಟಗಾರಿಕೆ, ಕೃಷಿ, ಪಶುಪಾಲನೆ ಹಾಗೂ ಮೀನುಗಾರಿಕೆ, ಕೈಗಾರಿಕೆ, ವಾಣಿಜ್ಯ ಇಲಾಖೆಗೆ ಮೀಸಲಾಗಿರುತ್ತದೆ. ಕೃಷಿ ಪರಿಕರ, ನರ್ಸರಿ ಗಿಡಗಳು, ಯಂತ್ರೋಪಕರಣಗಳ ಮಾರಾಟವೂ ನಡೆಯಲಿದೆ. ರೈತರು ಬೆಳೆದ ಹಣ್ಣು, ತರಕಾರಿ, ಸಂಬಾರ ಬೆಳೆಗಳ ಪ್ರದರ್ಶನ ನಡೆಸಿ ವಿಜೇತರಿಗೆ ಬಹುಮಾನ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತರು ತಾ. ೨೩ರೊಳಗೆ ನೋಂದಾಯಿಸಿಕೊಳ್ಳುವAತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಹೆಚ್. ಶಶಿಧರ್ ಮನವಿ ಮಾಡಿದರು.

ಒಣ ಹೂ ಜೋಡಣೆ, ಬಿಡಿ ಹೂ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಇದಕ್ಕೆ ತಾ. ೨೪ರ ಬೆಳಿಗ್ಗೆ ೮ ಗಂಟೆಯೊಳಗೆ ನೋಂದಾಯಿಸಿಕೊಳ್ಳುವAತೆ ತಿಳಿಸಿದರು. ಹೆಚ್ಚಿನ ಮಾಹಿತಿಗೆ ೯೪೪೮೬೧೩೩೫೫ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು.