ಗೋಣಿಕೊಪ್ಪಲು, ಜ. ೧೯:ಕೊಡಗಿನ ಜಮ್ಮಾಬಾಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಯಶಸ್ವಿಯಾಗಿದ್ದಾರೆ. ಇದರಿಂದ ಜಿಲ್ಲೆಯ ಜ್ವಲಂತ ಸಮಸ್ಯೆಗೆ ಪರಿಹಾರ ಲಭಿಸಿದೆ. ಆದರೆ, ಮಾಜಿ ಶಾಸಕರುಗಳು ಈ ಬಗ್ಗೆ ಅಸಮರ್ಪಕ ಮಾಹಿತಿ ನೀಡುತ್ತಿದ್ದಾರೆ. ಇವರ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟೂ ಮೊಣ್ಣಪ್ಪ ಆರೋಪಿಸಿದ್ದಾರೆ.
ಗೋಣಿಕೊಪ್ಪಲುವಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರುಗಳು ಕಳೆದ ೨೦-೨೫ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಅಧಿಕಾರ ನಡೆಸಿರುವ ಮಾಜಿ ಶಾಸಕರುಗಳು ತಮ್ಮ ಸಾಧನೆ ಏನು ಎಂದು ಜನರ ಮುಂದಿಡಲಿ. ಇದೀಗ ಶಾಸಕ ಎ.ಎಸ್.ಪೊನ್ನಣ್ಣನವರ ಎರಡೂವರೆ ವರ್ಷದ ಸಾಧನೆಯನ್ನು ಜನರ ಮುಂದಿಡಲು ಕಾಂಗ್ರೆಸ್ ಪಕ್ಷ ತಯಾರಿದೆ. ಶಾಸಕ ಎ.ಎಸ್.ಪೊನ್ನಣ್ಣನವರ ಅಭಿವೃದ್ಧಿ ಸಹಿಸದೆ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ಜಮ್ಮಾಬಾಣೆ ಸಮಸ್ಯೆಯ ವಿಚಾರದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳು ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದವರನ್ನು ಪ್ರಶಂಸಿಸಬೇಕು. ಕೇವಲ ಪ್ರಚಾರಕ್ಕೋಸ್ಕರ ಹೇಳಿಕೆಗಳನ್ನು ನೀಡುವುದು ನಿಲ್ಲಿಸಲಿ, ಜಮ್ಮಾಬಾಣೆ ವಿಚಾರದಲ್ಲಿ ಅಗತ್ಯ ಸಲಹೆಗಳಿದ್ದಲ್ಲಿ ನೀಡಲಿ, ವಿಧಾನ ಸೌಧದಲ್ಲಿ ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರು, ಹಲವು ಪಕ್ಷಗಳ ಶಾಸಕರುಗಳು ಕೊಡಗಿನ ಜಮ್ಮಾಬಾಣೆ ವಿಚಾರದಲ್ಲಿ ಧ್ವನಿ ಎತ್ತಿದ್ದಾರೆ. ಇದರ ವಿಚಾರದಲ್ಲಿ ಶಾಸಕ ಪೊನ್ನಣ್ಣ ಅವರ ಕಾನೂನಿನ ಜ್ಞಾನ ಸಹಕಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಉಪಸ್ಥಿತರಿದ್ದರು.