ಕುಶಾಲನಗರ, ಜ. ೧೯: ಕುಶಾಲನಗರದಲ್ಲಿ ತಾ.೨೫ ರಂದು ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ಹಿಂದೂ ಸಮಾಜದ ವಿವಿಧ ಸಮುದಾಯಗಳ ಪ್ರಮುಖರು ಇಲ್ಲಿನ ವಾಸವಿ ಮಹಲ್‌ನಲ್ಲಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಿಂದೂ ಸಂಘಟನೆಗಳ ಮುಖಂಡ ಜಿ.ಎಲ್.ನಾಗರಾಜು, ಮಾತನಾಡಿ, ನಶಿಸುತ್ತಿರುವ ಹಿಂದೂ ಸನಾತನ ಸಂಸ್ಕೃತಿ ಸಂರಕ್ಷಣೆಗೆ ಹಿಂದೂಗಳು ಎಲ್ಲರೂ ಒಗ್ಗಟ್ಟಾಗಬೇಕಿದೆ. ಕುಶಾಲನಗರದ ಪ್ರತಿಯೊಂದು ಹಿಂದೂ ಕುಟುಂಬಗಳು ತಪ್ಪದೇ ಶೋಭಾ ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಹಿಂದೂ ಸಮಾಜ ಹಲವು ಜಾತಿ ಉಪಜಾತಿಗಳಲ್ಲಿ ಹಂಚಿ ಹೋಗಿದ್ದರೂ ಕೂಡ ಹಿಂದೂ ಸಂಗಮದ ವಿಚಾರದಲ್ಲಿ ನಾವೆಲ್ಲರೂ ಒಮ್ಮತದಿಂದ ಸೇರಿದ್ದೇವೆ ಎಂದು ಮುತ್ತಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ ಹೇಳಿದರು.
ಹಿಂದೂ ಸಮಾಜದ ಆಚಾರ ವಿಚಾರಗಳು ಹಾಗೂ ಸಂಪ್ರದಾಯಗಳನ್ನು ಹಿಂದೂಗಳು ಒಗ್ಗಟ್ಟಾಗಿ ಸಂರಕ್ಷಿಸಬೇಕು ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಹೇಳಿದರು.
ಕುಶಾಲನಗರದ ತಾವರೆಕೆರೆಯ ವಿವೇಕಾನಂದ ಕಾಲೇಜು ಬಳಿಯಿಂದ ಮಧ್ಯಾಹ್ನ ೨.೩೦ ಗಂಟೆಯಿAದ ಶೋಭಾ ಯಾತ್ರೆ ಮುಖ್ಯ ರಸ್ತೆ ಮೂಲಕ ಐಬಿ ರಸ್ತೆಗಾಗಿ ಗಣಪತಿ ದೇವಾಲಯ ವೃತ್ತದಿಂದ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯ ಖಾಸಗಿ ಬಸ್ ನಿಲ್ದಾಣದವರೆಗೆ ನಡೆಯಲಿದೆ.
ಬಳಿಕ ವೇದಿಕೆ ಕಾರ್ಯಕ್ರಮ ೩.೩೦ಕ್ಕೆ ಆರಂಭವಾಗಲಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಅಧ್ಯಕ್ಷ ರವೀಂದ್ರ ಪುತ್ತೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಧುಸೂದನ್ ತಿಳಿಸಿದರು. ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುAಡ, ಗೌಡ ಯುವ ವೇದಿಕೆ ಅಧ್ಯಕ್ಷ ಕೊಡಗನ ಹರ್ಷ, ದೇವಾಂಗ ಸಮಾಜದ ಅಧ್ಯಕ್ಷ ಡಿ.ವಿ.ರಾಜೇಶ್, ಕೇರಳ ಸಮಾಜದ ಅಧ್ಯಕ್ಷ ಪಿ. ರವೀಂದ್ರ, ಮಹಾವೇಲಿ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಜಿ.ಪ್ರಕಾಶ್, ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಹೆಚ್.ಬಿ.ರಾಜಮೂರ್ತಿ, ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಯಶವಂತ್ ಅಚ್ಚಯ್ಯ, ನಾಮಧಾರಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಎಸ್.ಅಶೋಕ್, ಬಿ.ಅಮೃತರಾಜು, ಚಂದ್ರು ಮತ್ತಿತರರು ಗೋಷ್ಠಿಯಲ್ಲಿ ಇದ್ದರು.