ವೀರಾಜಪೇಟೆ ಎಂದು ಯಾರಾದರು ಹೇಳಿದರೆ ನಿಮಗೆ ಮನಸ್ಸಿಗೆ ಭಾಸವಾಗುವಾಗುದು ನನ್ನನ್ನು. ನಾನು ಕ್ಲಾಕ್‌ಟವರ್. ನಾನು ವೀರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿದ್ದೇನೆ. ಬಸ್ಸಿನಲ್ಲೋ ಅಥವಾ ಇನ್ಯಾವುದೋ ವಾಹನದಲ್ಲೋ ಬಂದರೆ ಗಡಿಯಾರ ಕಂಬದಲ್ಲಿ ನನ್ನನ್ನು ಕಾಣಬಹುದು ಎಂದು ಹೆಮ್ಮೆಯಿಂದ ನೀವುಗಳು ಹೇಳುತ್ತೀರ. ಸಮಯ ಎಷ್ಟಾಗಿದೆ ಎಂದು ದೂರದಿಂದ ನೀವು ನಿಂತ ಜಾಗದಿಂದಲೇ ನನ್ನನ್ನು ನೋಡುತ್ತೀರ. ನಿಮಗೆ ಸಮಯ ತೋರಿಸದೇ ಎಷ್ಟೊಂದು ದಿನಗಳಾಗಿವೆ ಎಂಬ ಕೊರಗು ನನ್ನನ್ನು ಕಾಡುತ್ತಿದೆ. ದಿನಾ ಅದೇ ಕೊರಗಿನಲ್ಲಿಯೇ ಕಾಲ ಕಳೆಯುತ್ತಿದ್ದೇನೆ. ನೀವುಗಳು ಯಾರು ನನ್ನ ಕಷ್ಟ ಕೇಳುತ್ತಿಲ್ಲ. ಸಮಯವನ್ನು ತೋರಿಸದೆ ನಿಂತ ಜಾಗದಲ್ಲಿಯೆ ನಿಂತಿರುವ ನನ್ನನ್ನು ನೋಡಿ ಹಿಡಿಶಾಪ ಹಾಕಿಕೊಂಡು ಹೋಗುತ್ತೀರ. ಪುರಸಭೆ ಮಾಡುವ ತಪ್ಪಿಗೆ ನನಗೇಕೆ ಈ ನಿಂದನೆ. ನನ್ನನ್ನು ಸರಿಯಾಗಿ ನೋಡಿಕೊಂಡರೆ ನಿಮಗೆ ದಿನಾ ಸಮಯವನ್ನು ತೋರಿಸುವುದಿಲ್ಲವೇ..? ಹಬ್ಬಹರಿದಿನಗಳು, ಪ್ರತಿಭಟನೆಗಳು ನಡೆದರೆ ಪಟಾಕಿ ಸಿಡಿಸಿ ನನ್ನ ಬುಡಕ್ಕೆ ಬೆಂಕಿ ಹಾಕಿ ನೀವು ಕುಷಿ ಪಡುತ್ತೀರ. ನಾನು ಬೆಂಕಿಯಲ್ಲಿ ಬೆಂದರೂ ನಿಮಗೆ ಸಮಯ ತೋರಿಸುತ್ತಿದ್ದೆ. ಬ್ಯಾನರ್-ಬಂಟಿAಗ್ಸ್ ಕಟ್ಟಲು ನನ್ನ ಎದೆಗೆ ಮೊಳೆ ಹೊಡೆಯುತ್ತೀರಲ್ಲ, ನಾನೇನು ಅಂತಾ ತಪ್ಪು ಮಾಡಿದ್ದೀನಿ. ದಿನಾ ನಿಮಗೆ ಸಮಯ ತೋರಿಸಿ ನಿಮ್ಮ ಕೆಲಸ ಕಾರ್ಯಗಳನ್ನು ಸುಗಮ ಗೊಳಿಸುವುದು ನನ್ನ ತಪ್ಪೇ? ನನಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ತಾತ್ಸಾರವೇ, ನನಗೇಕೆ ಇಂತಹ ಶಿಕ್ಷೆ. ಇನ್ನೆಷ್ಟು ದಿನ ನಾನು ನಿಮ್ಮ ಬೈಗುಳ, ನಿಂದನೆ ಸಹಿಸಿಕೊಳ್ಳಬೇಕು. ಶಾಸಕರುಗಳು, ಸಂಸದರು, ಅಧಿಕಾರಿಗಳು ಎಲ್ಲರೂ ನನ್ನನ್ನು ನೋಡಿಕೊಂಡು ತೆರಳುತ್ತಾರೆ. ಅಧಿಕಾರಿಗಳ ವಿರುದ್ಧ ಶಾಸಕರ ಮನೆಗೆ ತೆರಳಿ ದೂರು ನೀಡಲು ನಿರ್ಧರಿಸಿದ್ದೇನೆ. ಯಾರೋ ಮಾಡಿದ ತಪ್ಪಿಗೆ ನನ್ನನ್ನು ಬಲಿಪಶು ಮಾಡುವುದು ಎಷ್ಟು ಸರಿ. ಮನುಕುಲವೇ ಒಂದು ಬಾರಿ ಯೋಚಿಸಿ ನನ್ನ ಕಷ್ಟಕ್ಕೆ ಸ್ಪಂದಿಸುವಿರಾ..

- ಇಂತೀ ನಿಮ್ಮ ಗಡಿಯಾರ ಕಂಬ

ಐತಿಹಾಸಿಕ ಹಿನ್ನಲೆ ಹಾಗೂ ಶತಮಾನ ಕಂಡ ವೀರಾಜಪೇಟೆಯ ಗಡಿಯಾರ ಕಂಬವು ೧೦೯ ವಸಂತಗಳನ್ನು ಕಳೆದಿದೆ. ವೀರಾಜಪೇಟೆ ಎಂದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಭಾಸವಾಗುವುದು ಪಟ್ಟಣದ ಮುಕುಟದಂತಿರುವ ಗಡಿಯಾರ ಕಂಬ. ಆದರೆ ಕಳೆದ ಒಂದು ವರ್ಷದಿಂದ ಗಡಿಯಾರ ತನ್ನ ಕಾಲಚಕ್ರವನ್ನು ಸ್ಥಗಿತ ಗೊಳಿಸಿದೆ. ಪುರಸಭೆಯ ಸೂಕ್ತ ನಿರ್ವಹಣೆ ಇಲ್ಲದೆ ಸುಣ್ಣಬಣ್ಣ ಬಳಿಯದೆ ವರ್ಷಗಳೆ ಕಳೆದಿರುವುದರಿಂದ ಗಡಿಯಾರ ಸ್ಥಗಿತಗೊಳ್ಳಲು ಕಾರಣವಾಗಿದೆ.

೧೯೧೧ರಲ್ಲಿ ದೇವಣಗೇರಿ ಗ್ರಾಮದ ಮುಕ್ಕಾಟಿರ ಕುಟುಂಬದ ಅಯ್ಯಪ್ಪ ಅವರು, ದೆಹಲಿಯಲ್ಲಿ ಬ್ರಿಟೀಷ್ ರಾಜನಿಂದ ನಡೆದ ಕೊರೋನೇಷನ್ ದರ್ಬಾರನ್ನು ನೆನಪಿಸುವುದಕ್ಕೋಸ್ಕರ ಗಡಿಯಾರ ಕಂಬವನ್ನು ನಿರ್ಮಿಸಲು ಉದ್ದೇಶಿಸಿದು. ನಂತರ ಅಂದಿನ ಚೀಫ್ ಕಮಿಷನರ್ ಹೂಗ್‌ಡಲಿ ಎಂಬವರು ೧೯೧೪ರಂದು ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭ ಫೆಬ್ರವರಿ ೫ ರಂದು ಗಡಿಯಾರ ಕಂಬಕ್ಕೆ ಶಿಲಾನ್ಯಾಸ ಮಾಡಿದ್ದರು.

೧೯೧೫ ಜನವರಿ ೧೬ ರಂದು ಅಂದಿನ ಜಿಲ್ಲಾ ನ್ಯಾಯಾಧೀಶರಾದ ಐ.ಸಿ.ಎಸ್ ಅಧಿಕಾರಿ ಆರ್.ಕೆ ಎಲ್ಲಿಸ್ ಗಡಿಯಾರ ಕಂಬವನ್ನು ಉದ್ಘಾಟಿಸಿದರು. ಅದೇ ದಿನ ಐತಿಹಾಸಿಕ ಗಡಿಯಾರ ಕಂಬವನ್ನು ಮುಕ್ಕಾಟಿರ ಕುಟುಂಬದ ಹಿರಿಯರಾದ ಅಯ್ಯಪ್ಪ ಪುರಸಭೆಗೆ ಹಸ್ತಾಂತರಿಸಿದರು.

೧೯೭೭ ರಲ್ಲಿ ವೀರಾಜಪೇಟೆಯ ಮುಖ್ಯ ಬೀದಿಗಳನ್ನು ಅಗಲೀಕರಣ ಮಾಡುವ ಸಂದರ್ಭದಲ್ಲಿ ಅಂದಿನ ಲೋಕೋಪಯೋಗಿ ಇಲಾಖಾ ಸಚಿವರಾಗಿದ್ದ ಚೆನ್ನಬಸಪ್ಪ ಅವರು ಈ ಗಡಿಯಾರ ಕಂಬವನ್ನು ಹೊಡೆದು ಹಾಕುವ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ ಸಾರ್ವಜನಿಕರ ಪ್ರತಿಭಟನೆಯಿಂದಾಗಿ ಗಡಿಯಾರ ಕಂಬ ಇನ್ನೂ ಉಳಿದುಕೊಂಡಿದೆ.

ವೀರಾಜಪೇಟೆ ಪಟ್ಟಣಕ್ಕೆ ವಿವಿಧೆಡೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಸಮಯವನ್ನು ತೋರಿಸುವ ಗಡಿಯಾರ ಕಂಬ ಪಟ್ಟಣಕ್ಕೆ ಮುಗುಟಗಿರಿಯಂತಿದೆ.

ವೀರಾಜಪೇಟೆ ಗಡಿಯಾರ ಕಂಬಕ್ಕೆ ಐತಿಹಾಸಿಕ ಹಿನ್ನಲೆ ಇರುವ ಕಾರಣ ಅದನ್ನು ರಕ್ಷಣೆ ಮಾಡುವುದು ಪುರಸಭೆ ಹಾಗು ಸಾರ್ವಜನಿಕರ ಕರ್ತವ್ಯವಾಗಿದೆ. ಗೌರಿ ಹಬ್ಬದ ಸಂದರ್ಭ ಹಾಗು ಯಾವುದೇ ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು ಗಡಿಯಾರ ಕಂಬದ ಬಳಿ ನಡೆಸುವ ಪ್ರತಿಭಟನೆಗಳಲ್ಲಿ ಪಟಾಕಿ ಸಿಡಿಸುವುದು, ಕಂಬಕ್ಕೆ ಮೊಳೆ ಹೊಡೆಯುವುದನ್ನು ನಿಷೇದಿಸಬೇಕಿದೆ.

ಒಂದು ಬಾರಿ ಗಡಿಯಾರ ನಿಂತಾಗ ಪುರಸಭೆ ಲಕ್ಷಾಂತರ ರೂಗಳನ್ನು ವ್ಯಯ ಮಾಡುತ್ತದೆ. ಕಳೆದ ಹಲವಾರು ವರ್ಷಗಳಿಂದ ಇದನ್ನೆ ಅನುಸರಿಸಿಕೊಂಡು ಬರುತ್ತಿದೆ. ಆದರೆ ಇದೀಗ ಗಡಿಯಾರ ನಿಂತು ಹೋಗಿದ್ದು, ಇದನ್ನು ಸರಿಪಡಿಸಲು ಪುರಸಭೆ ಮುಂದಾಗದೇ ಇರುವುದು ವಿಪರ್ಯಾಸ.

ಗಡಿಯಾರ ಕಂಬವನ್ನು ಮುಕ್ಕಾಟಿರ ಕುಟುಂಬದ ಪೂರ್ವಜರು ನಿರ್ಮಿಸಿಕೊಟ್ಟಿದ್ದಾರೆ. ಪಟ್ಟಣಕ್ಕೆ ಇದೊಂದು ಚಿಹ್ನೆಯಾಗಿದೆ. ಇದು ಸ್ಮಾರಕವಾಗಿ ಉಳಿಯಬೇಕು ಎಂಬುದು ಸಾರ್ವಜನಿಕರ ಅಭಿಲಾಷೆಯಾಗಿದೆ. ಗಡಿಯಾರ ಕಂಬದ ಸುತ್ತಮುತ್ತ ಪಟಾಕಿಗಳನ್ನು ಸಿಡಿಸುವುದು, ಕಂಬಕ್ಕೆ ಮೊಳೆಗಳನ್ನು ಒಡೆಯುವುದನ್ನು ನಿಷೇಧಿಸಬೇಕು. ಪಟ್ಟಣದ ಗಡಿಯಾರ ಕಂಬ ನೂರು ವಸಂತಗಳನ್ನು ಕಂಡಿರುವ ಹಿನ್ನಲೆಯಲ್ಲಿ ಅಂಚೆ ಇಲಾಖೆ ಗಡಿಯಾರ ಕಂಬದ ಚಿತ್ರ ಇರುವ ಒಂದು ಅಂಚೆ ಚೀಟಿಯನ್ನು ಕೂಡ ಬಿಡುಗಡೆಗೊಳಿಸಿದೆ.

ಇತಿಹಾಸದ ಪುಟದಲ್ಲಿ ಸೇರಿಕೊಂಡಿರುವ ಗಡಿಯಾರ ಕಂಬವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪುರಸಭೆ ಕೂಡ ಕಾಲಕ್ಕೆ ತಕ್ಕಂತೆ ನಿರ್ವಹಣೆಯನ್ನು ಮಾಡಬೇಕಿದೆ.

- ಪಳೆಯಂಡ ಪಾರ್ಥ ಚಿಣ್ಣಪ್ಪ.