ವೀರಾಜಪೇಟೆ, ಜ. ೨೦: ಗಡಿಯಾರ ಕಂಬದ ಬಳಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ದ್ವಿಮುಖ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿ ನಗರದ ವರ್ತಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಶಾಸಕರಿಗೆ ಮಾಹಿತಿ ನೀಡಿದ ವರ್ತಕರು, ಗಡಿಯಾರ ಕಂಬದ ಬಳಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಏಕಮುಖ ಸಂಚಾರದ ವ್ಯವಸ್ಥೆ ಬಹಳ ವರ್ಷಗಳಿಂದ ಇತ್ತು. ಅಲ್ಲದೆ ತಿಂಗಳ ಹದಿನೈದು ದಿನ ಒಂದು ಬದಿಯಲ್ಲಿ ಇನ್ನು ೧೫ ದಿನ ಮತ್ತೊಂದು ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ಪುರಸಭೆ ಮತ್ತು ನಗರ ಪೊಲೀಸರಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ವ್ಯಾಪಾರ ವಹಿವಾಟು ನಡೆಸುವ ಅಂಗಡಿಗಳಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪುರಸಭೆಯು ದ್ವಿಮುಖ ಸಂಚಾರದ ವ್ಯವಸ್ಥೆ ಮಾಡುವುದಾಗಿ ಮಾಹಿತಿ ಬಂದಿದ್ದು ಇದರಿಂದ ವರ್ತಕರಿಗೆ ವ್ಯಾಪಾರ ವಹಿವಾಟು ನಡೆಸಲು ಸಮಸ್ಯೆಯಾಗುತ್ತದೆ. ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಬೇಕು. ಇದೀಗ ಕಾಫಿ ಸೀಸನ್ ಆಗಿರುವುದರಿಂದ ಜನ ವ್ಯಾಪಾರಕ್ಕೆಂದು ಬರುವವರಿದ್ದಾರೆ, ಇಂತಹ ಸಂದರ್ಭ ಪಾರ್ಕಿಂಗ್‌ಗೆ ಅವಕಾಶ ನೀಡದೆ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಿದ್ದಲ್ಲಿ ವ್ಯಾಪಾರ ವ್ಯವಹಾರಗಳಿಗೆ ಹಿನ್ನಡೆಯಾಗಲಿದೆ ಎಂದು ವಿವರಿಸಿದರು.

ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ ನಗರದ ಅಭಿವೃದ್ಧಿ ಮಾಡಲು ನಮ್ಮ ಯಾವುದೇ ವಿರೋಧವಿಲ್ಲ. ಆದರೆ ದಿಢೀರ್ ಆಗಿ ಈ ರೀತಿಯ ನಿರ್ಧಾರದಿಂದ ವರ್ತಕರಿಗೆ ಹಿನ್ನಡೆಯಾಗಲಿದೆ. ಸರಿಯಾದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿರುವ ಅದೆಷ್ಟೋ ವರ್ತಕರುಗಳಿದ್ದಾರೆ. ಹೀಗಿರುವಾಗ ದ್ವಿಮುಖ ಸಂಚಾರ ಮಾಡಿ ವಾಹನ ನಿಲುಗಡೆಗೆ ಅವಕಾಶ ನೀಡದೆ ಇದ್ದಲ್ಲಿ ವರ್ತಕರಿಗೆ ಮತ್ತಷ್ಟು ಸಮಸ್ಯೆಯಾಗುತ್ತದೆ. ವಾಹನ ಬೇರೆಡೆ ನಿಲುಗಡೆ ಮಾಡಿ ಬಂದು ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಶಾಸಕರು ಇದರ ಬಗ್ಗೆ ಗಮನಹರಿಸಿ ವರ್ತಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು. ವರ್ತಕರ ಸಂಘದ ನಿರ್ದೇಶಕ ಸುರೇಶ್ ಮಾತನಾಡಿ, ಲಕ್ಷಾಂತರ ರೂಪಾಯಿ ಮುಂಗಡ ಹಣವನ್ನು ಕೊಟ್ಟು ಮಾಸಿಕ ಬಾಡಿಗೆಯನ್ನು ನೀಡಿ ಕೆಲಸಗಾರರ ಸಂಬಳವನ್ನು ನೀಡಲು ಕೂಡ ಕಷ್ಟವಾಗುತ್ತಿದೆ. ಈ ರಸ್ತೆಯಲ್ಲಿ ಕೇವಲ ಮಧ್ಯಾಹ್ನದವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರಿಂದ ನಮ್ಮ ಕುಟುಂಬಗಳು ಬದುಕುತ್ತಿವೆ. ದಯವಿಟ್ಟು ಸಹಕಾರ ನೀಡುವಂತೆ ಕೋರಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ ನಗರ ಅಭಿವೃದ್ಧಿ ಹೊಂದಲು ಸರಕಾರದ ವತಿಯಿಂದ ವಿವಿಧ ಕಾಮಗಾರಿ ನಿರ್ವಹಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ವರ್ತಕರು ಕೂಡ ಸ್ಪಂದಿಸಬೇಕು. ಮನವಿ ಸಂಬAಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗಳಿಗೆ, ನಗರ ಠಾಣಾಧಿಕಾರಿಗಳಿಗೂ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ವರ್ತಕರ ಸಂಘದ ಪ್ರಮುಖರಾದ ಮೊಹಮ್ಮದ್ ಹನೀಫ್, ವಿನೋದ್, ಸುನಿಲ್, ಅಬುಸಾಲಿ, ಸುಭಾಷ್, ರಶೀದ್, ಭಗತ್ ಸಿಂಗ್, ಅಬ್ದುಲ್ ರಜಾಕ್, ನಶ್ರುಲ್ಲಾ, ಗಗನ್, ಮನ್ಸೂರ್ ನವಾಫ್, ಶಕೀರ್, ಶಭರೀಶ್ ಸೇರಿದಂತೆ ಹಲವಾರು ವರ್ತಕರು ಹಾಜರಿದ್ದರು.