ಶನಿವಾರಸಂತೆ, ಜ. ೨೦: ಇಂದಿನ ಆಧುನಿಕತೆಯ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬ ರಿಗೂ ಯೋಗಾಭ್ಯಾಸ ಅತ್ಯವಶ್ಯಕವಾಗಿದೆ ಎಂದು ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಹೇಳಿದರು.
ಪಟ್ಟಣದ ಸಹಕಾರ ಸಂಘದ ಸಭಾಂಗಣದಲ್ಲಿ ನಾಗಮಂಗಲದ ಸ್ವಾಸ್ಥ್ಯ ಜೀವನಮಾರ್ಗ ಯೋಗ ಪ್ರತಿಷ್ಠಾನ ಹೊಂಗಿರಣ ದೇಶಿ ಚಿಕಿತ್ಸಾ ಕೇಂದ್ರ ಹಾಗೂ ಶನಿವಾರಸಂತೆಯ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಡೆದ ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿ ಹೆಚ್ಚು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ಜೀವನದಲ್ಲಿ ಯೋಗಾಭ್ಯಾಸ ಅತ್ಯಂತ ಸಹಕಾರಿಯಾಗಲಿದೆ. ಯೋಗ ಆರೋಗ್ಯ ಮತ್ತು ಕ್ಷಮತೆಯ ರಕ್ಷಾ ಕವಚವಾಗಿದ್ದು ಸಾರ್ವಜನಿಕರು ಮತ್ತು ಪೊಲೀಸ್ ಇಲಾಖಾ ಸಿಬ್ಬಂದಿಗಳ ಯೋಗಕ್ಷೇಮದ ದೃಷ್ಟಿಯಿಂದ ಯೋಗ ಶಿಬಿರವನ್ನು ಸ್ಥಳೀಯ ಯೋಗಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದರು.
ಯೋಗಗುರು ಲಕ್ಷö್ಮಣ್ ಜೀ ಮಾತನಾಡಿ, ಆಧುನಿಕ ಜಡ ಜೀವನ ಶೈಲಿ ಹಾಗೂ ಹದಗೆಟ್ಟಿರುವ ಆಹಾರ ಕ್ರಮ, ಮಾನಸಿಕ ಒತ್ತಡದಿಂದಾಗಿ ಜನರು ನಾನಾ ರೋಗಗಳಿಂದ ಬಳಲುವಂತಾಗಿದೆ. ಆರೋಗ್ಯ ವೃದ್ಧಿಗೆ ಆರೋಗ್ಯಕರ ಅಭ್ಯಾಸಗಳು ಮುಖ್ಯ. ಈ ನಿಟ್ಟಿನಲ್ಲಿ ಶಾರೀರಕ, ಬೌದ್ಧಿಕ, ಸಾಮಾಜಿಕ ಮತ್ತು ಭಾವನಾತ್ಮಕ ಆರೋಗ್ಯ ವೃದ್ಧಿಗೆ ಯೋಗ ಸಹಕಾರಿ ಎಂದರು.
ಶಿಬಿರದಲ್ಲಿ ಶನಿವಾರಸಂತೆ ಪತಂಜಲಿ ಯೋಗ ಕೇಂದ್ರದ ಯೋಗ ಗುರು ಎ.ಡಿ. ಮೋಹನ್ ಕುಮಾರ್, ಸ್ವಾಸ್ಥö್ಯ ಮಾರ್ಗ ರಾಜ್ಯ ಸಂಚಾಲಕ ಸಕಲೇಶಪುರದ ಲಕ್ಷö್ಮಣ್ ಕೀರ್ತಿ, ಹರೀಶ್ ಕಾಜೂರು, ಉಮಾಸುತಾ, ಶ್ರುತಿ, ಭಾನುಮತಿ ಹಾಜರಿದ್ದರು. ೮ ದಿನಗಳವರೆಗೆ ನಡೆಯುವ ಶಿಬಿರದಲ್ಲಿ ೪೦ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.