ಕಣಿವೆ, ಜ. ೨೦: ಕಳೆದ ಮಾರ್ಚ್ನಿಂದ ಏಪ್ರಿಲ್ ನಡುವೆ ಬಿತ್ತನೆ ಮಾಡಿದ್ದ ಕೃಷಿಕರ ಪಾಲಿನ ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗದೇ ಸಮಾನಂತರ ದರ ಕಾಯ್ದುಕೊಂಡಿರುವುದು ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ತೀವ್ರ ನಿರಾಸೆ ಉಂಟು ಮಾಡಿದೆ.

ಇದೀಗ ಮಾರುಕಟ್ಟೆಯಲ್ಲಿ ೬೦ ಕೆಜಿ ತೂಕದ ಚೀಲವೊಂದಕ್ಕೆ ೨,೮೦೦ ರಿಂದ ೨೮೫೦ ರೂ ಇದೆ. ಹೊಸ ವರ್ಷದ ಆರಂಭದಲ್ಲಿ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವ ಹಂಬಲದಿAದ ಬೆಳೆದ ಭೂಮಿಯಲ್ಲಿ ಶುಂಠಿ ಫಸಲನ್ನು ಇಟ್ಟುಕೊಂಡು ಜಾತಕ ಪಕ್ಷಿಯಂತೆ ಕಾದಿದ್ದ ಕೃಷಿಕರಿಗೆ ನಷ್ಟದ ಮೇಲೆ ನಷ್ಟದ ಹೊಡೆತ ಬಿದ್ದಿದೆ.

ಕಳೆದ ಸೆಪ್ಟೆಂಬರ್ ಅವಧಿಯಲ್ಲಿ ಚೀಲವೊಂದಕ್ಕೆ ೨೮೦೦ ರೂಗಳಿದ್ದಾಗ ಬೆಲೆ ೫೦೦೦ ರೂ ದಾಟಬಹುದು ಎಂಬ ಕೃಷಿಕರ ನಿರೀಕ್ಷೆಗೆ ತೀವ್ರ ಹಿನ್ನಡೆಯಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಟಾವು ಮಾಡಿದ್ದರೆ ಉತ್ತಮವಾದ ಇಳುವರಿಯೂ ಬರುತ್ತಿತ್ತು.

ಜೊತೆಗೆ ಇದ್ದುದರಲ್ಲಿ ಉತ್ತಮವಾದ ೨೮೦೦ ರೂ ದರವೂ ಇತ್ತು. ಆದರೆ ಈಗ ಭೂಮಿಯಲ್ಲಿ ಇರುವ ಶುಂಠಿ ಫಸಲು ಬಿಸಿಲಿಗೆ ತೂಕ ಕಳೆದುಕೊಂಡು ಇಳುವರಿ ಹಾಗೂ ಬೆಳೆ ನಷ್ಟ ಒಂದೆಡೆಯಾದರೆ, ದರ ಕುಸಿತದ ನಷ್ಟ ಇನ್ನೊಂದೆಡೆ. ಹಾಗಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೊರರಾಜ್ಯಗಳ ಧಾರಣೆ ಅಧಿಕ

ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಸತಾರ, ಸಾಂಗ್ಲಿ, ಔರಂಗಾಬಾದ್, ಅಸ್ಸಾಂನ ಧೀಮಾಪುರ, ಪಶ್ಚಿಮ ಬಂಗಾಳದ ಸಿಳಿಗುರಿ, ಹೂಗ್ಲಿ ಮೊದಲಾದೆಡೆಗಳಲ್ಲಿ ಶುಂಠಿಯ ಬೆಳೆ ಅಧಿಕವಾಗಿದ್ದು ಅಲ್ಲಿಂದ ಮುಖ್ಯ ಮಾರುಕಟ್ಟೆಯಾಗಿರುವ ದೆಹಲಿ ಹಾಗೂ ಕೋಲ್ಕತ್ತಾ ಅಂತರರಾಷ್ಟಿçÃಯ ಮಾರುಕಟ್ಟೆಗೆ ಯಥೇಚ್ಛ ಪ್ರಮಾಣದಲ್ಲಿ ಶುಂಠಿ ಫಸಲು ಬರುತ್ತಿರುವುದು ಹಾಗೂ ಬೇಡಿಕೆ ಕುಸಿದಿರುವುದು ದರ ಏರಿಕೆಯಾಗದೇ ಇರಲು ಮುಖ್ಯ ಕಾರಣವಾಗಿದೆ ಎನ್ನಲಾಗುತ್ತಿದೆ. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡಗು ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಶುಂಠಿ ಬೆಳೆಯುವ ರೈತರಿಂದ ಲೋಡುಗಟ್ಟಲೇ ಶುಂಠಿ ಫಸಲು ಖರೀದಿಸಿ ಮಾರುಕಟ್ಟೆಗೆ ರವಾನಿಸುತ್ತಿದ್ದ ಸ್ಥಳೀಯ ವ್ಯಾಪಾರಿಗಳು ಈ ಬಾರಿ ಬೆಲೆ ಏರಿಕೆಯಾಗದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದ ನಷ್ಟ ಅನುಭವಿಸಿರುವುದಾಗಿ ಕುಶಾಲನಗರದ ವ್ಯಾಪಾರಿಗಳಾದ ಚಿಕ್ಕತ್ತೂರು ರಾಜಣ್ಣ, ಏಲಕ್ಕನೂರು ಪ್ರಭಣ್ಣಾ, ಹೆಬ್ಬಾಲೆ ರಾಜಶೇಖರ್, ಶರತ್, ಮಣಜೂರು ಮಲ್ಲಿಕಾ, ಮತ್ತಿತರರು “ಶಕ್ತಿ'' ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ನಾವು ಪರಿಚಿತರಾದ ಸ್ಥಳೀಯ ರೈತರಿಂದ ಒಂದು ಬೆಲೆ ಕಟ್ಟಿ ಖರೀದಿಸಿ ರಫ್ತು ಮಾಡಿದರೆ ಮೂಲ ಮಾರುಕಟ್ಟೆಗಳಲ್ಲಿಯೇ ವ್ಯತಿರಿಕ್ತ ದರ ಇದ್ದು ನಮಗೆ ಬಹಳ ನಷ್ಟವಾಗುತ್ತಿದೆ ಎಂದು ಅವರುಗಳು ದೂರಿಕೊಂಡಿದ್ದಾರೆ.

ಕಾಡಿದ ವೈರಸ್‌ನಿಂದಾಗಿ ಇಳುವರಿ ಕುಸಿತ

ಕಳೆದ ಬಾರಿ ಶುಂಠಿ ಬೆಳೆಗಾರರ ಜೇಬು ಖಾಲಿ ಮಾಡಿದ್ದ ಶುಂಠಿಗೆ ಕಾಡಿದ ವೈರಸ್ ರೋಗದ ಫಲವೇ ಇಂದಿನ ೨೮೦೦ ರೂ ಗರಿಷ್ಠ ದರಕ್ಕೆ ಕಾರಣ ಎನ್ನಲಾಗುತ್ತಿದೆ. ಶುಂಠಿ ಬೆಳವಣಿಗೆಯಲ್ಲಿರುವ ಸಂದರ್ಭ ಕಣ್ಣಿಗೆ ಕಾಣದ ಭಯಾನಕವಾದ ವೈರಸ್ ರೋಗ ಗಾಳಿಯಲ್ಲಿಯೇ ಹರಡಿ ಶುಂಠಿಗೆ ಮಾರಕವಾದ್ದರಿಂದ ಬಹಳಷ್ಟು ಮಂದಿ ಇದರ ಹತೋಟಿಗೆ ಹೆದರಿ ಅಂದು ಮಾರುಕಟ್ಟೆಯಲ್ಲಿ ಇದ್ದ ಕೇವಲ ೧೫೦೦ ರೂಗೆ ಕಟಾವು ಮಾಡಿದ್ದರು.

ಕ್ರಮೇಣ ಶುಂಠಿ ಫಸಲು ಶೇ. ೪೦ ಭಾಗ ಕಟಾವು ಆದ ಮೇಲೆ ಉಳಿದ ಶೇ.೬೦ ಭಾಗ ಶುಂಠಿಗೆ ೩೦೦೦ ರೂ ದೊರಕಿತು. ಇದೀಗ ಈ ದರ ೨೮೦೦ ರೂ ಅಂತರ ಕಾಯ್ದುಕೊಂಡಿದೆ. ಹಾಗಾಗಿ ವೈರಸ್ ಬಾಧಿತ ರೈತರು ಈ ಬಾರಿಯೂ ಸಾಕಷ್ಟು ನಷ್ಟಕ್ಕೆ ತುತ್ತಾದರು. ವೈರಸ್ ವಿರುದ್ದ ಹೋರಾಡಿ ಜಯಿಸಿದ ಒಂದಿಷ್ಟು ಕೃಷಿಕರು ಖರ್ಚು ಮಾಡಿದ ಹಣ ಪಡೆದರು. ಇನ್ನು ಜೋಪಾನವಾಗಿ ಸಲಹಿದ ಇಳುವರಿ ಉತ್ತಮ ಇರುವ ಕೆಲವೇ ಮಂದಿ ಕೃಷಿಕರಿಗೆ ಈ ೨೮೦೦ ಬೆಲೆಯ ಲಾಭ ದೊರಕಿದೆ.

ಮತ್ತೆ ಈ ಬಾರಿಯ ಮಾರ್ಚ್ ಬಳಿಕ ಬಿತ್ತನೆ ಮಾಡಲು ಯೋಜಿಸಿರುವ ಬೆಳೆಗಾರರಿಗೆ ಈ ಬಾರಿ ೩೫೦೦ ರಿಂದ ೩,೭೦೦ ರೂಗಳಿಗೆ ಬಿತ್ತನೆ ಬೀಜ ದೊರಕುವ ಸಂಭವ ಇದೆ ಎನ್ನುತ್ತಾರೆ ಏಲಕ್ಕನೂರು ಪ್ರಭಣ್ಣ ಹಾಗೂ ಚಿಕ್ಕತ್ತೂರು ರಾಜಣ್ಣ.

ಅಂತೂ ಇಂತೂ ಈ ಬಾರಿಯೂ ನಷ್ಟ ಲಾಭ ಕಂಡ ಹಲವು ಮಂದಿ ಮತ್ತೆ ಅದೇ ಭರವಸೆಯೊಂದಿಗೆ ಭೂಮಿ ತಾಯಿ ನಂಬಿ ಶುಂಠಿ ಬಿತ್ತನೆಗೆ ಯೋಜನೆ ರೂಪಿಸಿದ್ದು ಉತ್ತಮ ಭೂಮಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.

-ಕೆ.ಎಸ್. ಮೂರ್ತಿ