ಮಡಿಕೇರಿ, ಜ. ೨೦: ಆಟೋ ಮಾಲೀಕರ, ಚಾಲಕರ ಸಂಘದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಹಾಗೂ ಸಾರ್ವಜನಿಕರಿಗೆ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಹೆಚ್. ಮೇದಪ್ಪ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ ೫, ೬ ಹಾಗೂ ೭ ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ತೀರ್ಮಾನಿಸಲಾಗಿದೆ. ಸಂಘದ ಸ್ಥಳೀಯ ಸ್ಥಾನೀಯ ಸಮಿತಿಯ ಸದಸ್ಯರು ಕ್ರಿಕೆಟ್ ತಂಡದಲ್ಲಿ ಆಡಲು ಅರ್ಹರಾಗಿರುತ್ತಾರೆ. ಜಿಲ್ಲೆಯ ೩೭ ಕಡೆಗಳಲ್ಲಿ ಸ್ಥಾನೀಯ ಸಮಿತಿಗಳಿದ್ದು, ೯ ಸಾವಿರದಷ್ಟು ಸದಸ್ಯರನ್ನು ಸಂಘ ಹೊಂದಿದೆ ಎಂದು ಹೇಳಿದರು. ಏಪ್ರಿಲ್ ೧೨ ರಂದು ಮಡಿಕೇರಿಯಲ್ಲಿ ಡ್ಯಾನ್ಸ್ ಮೇಳ ನಡೆಯಲಿದ್ದು, ಆಟೋ ಚಾಲಕ ಕುಟುಂಬದವರು ಹಾಗೂ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಒಂದು ತಂಡದಲ್ಲಿ ಗರಿಷ್ಟ ೫ ರಿಂದ ೬ ಮಂದಿ ಇರಬೇಕು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಗುವುದು. ಅಂದು ಬೆಳಿಗ್ಗೆ ಸಾರ್ವಜನಿಕರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ಆಯೋಜಿಸಲಾಗಿದೆ. ಇದೇ ಸಂದರ್ಭ ಕ್ರಿಕೆಟ್ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು. ಕ್ರಿಕೆಟ್‌ನಲ್ಲಿ ಭಾಗವಹಿಸುವ ತಂಡಗಳು ಮಾ. ೨೫ ರೊಳಗೆ, ಡ್ಯಾನ್ಸ್ ಮೇಳಕ್ಕೆ ಏ. ೫ ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಕೋರಿದ ಅವರು, ಮಾಹಿತಿಗೆ ೯೬೮೬೩೦೦೭೩೮, ೬೩೬೦೨೫೨೬೮೯ ಅಥವಾ ೯೪೮೩೮೪೦೬೩೭ ಸಂಖ್ಯೆಯನ್ನು ಸಂಪರ್ಕಿಸುವAತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಮಡಿಕೇರಿ ನಗರಾಧ್ಯಕ್ಷ ಎ. ಸಮದ್, ಪ್ರಧಾನ ಕಾರ್ಯದರ್ಶಿ ದಿನೇಶ್ ಬಾರನ, ಖಜಾಂಚಿ ಹೆಚ್.ಎಸ್. ನಾಗರಾಜು, ಸಂಘಟನಾ ಕಾರ್ಯದರ್ಶಿಗಳಾದ ಪ್ರವೀಣ್ ಮುದ್ಯನ, ಕೆ.ಕೆ. ಸುಕುಮಾರ್ ಹಾಜರಿದ್ದರು.