ಕುಶಾಲನಗರ, ಜ. ೨೦: ಕುಶಾಲನಗರ ಕೊಡವ ಸೌಹಾರ್ದ ಸಹಕಾರಿ ನಿಯಮಿತ ಸಂಘದ ನೂತನ ಕಚೇರಿಗೆ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ಚಾಲನೆ ನೀಡಿದರು.
ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ಸಮುದಾಯದ ಏಳಿಗೆಯ ಗುರಿಯೊಂದಿಗೆ ಸ್ಥಾಪನೆಯಾದ ಸಂಸ್ಥೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡುವುದರೊಂದಿಗೆ ಯಶಸ್ಸಿಗೆ ಸಹಕರಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಉದ್ಯಮಿ ಹಾಗೂ ಕಾಫಿ ಬೆಳೆಗಾರರಾದ ಜೆಮ್ಸಿ ಪೊನ್ನಪ್ಪ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ಆರ್ಥಿಕ ಸಹಾಯ ಪಡೆಯುವುದರೊಂದಿಗೆ ತಮ್ಮ ಹಾಗೂ ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.
ಕಚೇರಿಯ ಗಣಕಯಂತ್ರ ವಿಭಾಗ ಉದ್ಘಾಟನೆ ಮಾಡಿದ ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚಿರ ಮನು ನಂಜುAಡ ಸಂಘವನ್ನು ಹೆಮ್ಮರವಾಗಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಸದಸ್ಯರದ್ದಾಗಿದೆ ಎಂದು ಹೇಳಿದರು. ಕೊಡವ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಕೋಡಿರ ಕೆ. ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಕೊಡವ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಲಾರಂಡ ಸಿ ಹೇಮಾವತಿ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರು ಇದ್ದರು.
ನಿರ್ದೇಶಕರಾದ ಚೆಪ್ಪುಡಿರ ರತನ್ ಕಾವೇರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಮಗ್ರ ಮಾಹಿತಿ ನೀಡಿದರು. ಇದೇ ಸಂದರ್ಭ ಸಂಸ್ಥೆಯ ಪ್ರಥಮ ವಾರ್ಷಿಕ ಮಹಾಸಭೆ ನಡೆಯಿತು.