ವೀರಾಜಪೇಟೆ, ಜ. ೨೦: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಬೋಯಿಕೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ರಸ್ತೆಯ ಉದ್ಘಾಟನೆ ಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನೆರವೇರಿಸಿದರು.

ಶಾಸಕ ಪೊನ್ನಣ್ಣ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಜೆಸಿಬಿಯ ಸಹಾಯ ದಿಂದ ಹೂವಿನ ಮಳೆಗೆರೆದು ಶಾಸಕರನ್ನು ಗೌರವಿಸಿದರು. ರೂ. ೨೦ ಲಕ್ಷ ವೆಚ್ಚದ ಅನುದಾನದಲ್ಲಿ ಸಾರ್ವಜನಿಕರ ಬಳಕೆಗಾಗಿ ಬೋಯಿಕೇರಿಯಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಶಾಸಕರು ಹೇಳಿದರು.

ಇಲ್ಲಿನ ಸಾರ್ವಜನಿಕರ ಬೇಡಿಕೆ ಯಂತೆ ಸ್ಮಶಾನದ ಅಭಿವೃದ್ಧಿಗಾಗಿ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ಒದಗಿಸಿಕೊಡುವುದಾಗಿ ಹಾಗೂ ನೂತನವಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಅದಕ್ಕೂ ತನ್ನಿಂದ ಆದ ಸಹಾಯ ಮಾಡುವುದಾಗಿ ಪೊನ್ನಣ್ಣ ಭರವಸೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾತನಾಡಿ, ವೀರಾಜಪೇಟೆ ಪುರಸಭೆ ವ್ಯಾಪ್ತಿಗೆ ಹೆಚ್ಚುವರಿಯಾಗಿ ಬೋಯಿಕೇರಿ ಸೇರ್ಪಡೆಗೊಂಡಿದೆ. ಇಲ್ಲಿಗೂ ಪುರಸಭೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡ ಬೇಕೆಂದು ಗ್ರಾಮಸ್ಥರ ಬೇಡಿಕೆ ಇದೆ.

ಅದರಂತೆ ವಿಶೇಷ ಅನುದಾನದಡಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಚರಂಡಿ ಕಾಮಗಾರಿ ಮಾಡಲಾಗಿದೆ. ಬೀದಿದೀಪ ಸೇರಿದಂತೆ ಇನ್ನಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತದೆ. ಇದೇ ಸಂದರ್ಭ ಶಾಸಕರನ್ನು ಸ್ಥಳೀಯ ಯುವಕರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಉಪಾಧ್ಯಕ್ಷ ಆಯುಬ್, ವಲಯ ಅಧ್ಯಕ್ಷ ಕಾಳಮಂಡ ಬೇಬಿ, ರವಿ, ಆಲಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ವೀರಾಜಪೇಟೆ ಪ್ರಚಾರ ಸಮಿತಿಯ ಅಧ್ಯಕ್ಷ ಎಸ್.ಎಚ್. ಮತೀನ್, ಪುರಸಭೆ ಮಾಜಿ ಸದಸ್ಯ ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಬೆನ್ನಿ ಆಗಸ್ಟಿನ್, ರಜಿನಿಕಾಂತ್, ಬಗರ್ ಹುಕುಂ ತಾಲೂಕು ಅಧ್ಯಕ್ಷ ಸಲಾಂ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಫೀಕ್, ಪಕ್ಷದ ಪ್ರಮುಖರು ಜೋಕಿಮ್, ಲೋಬೊ, ಡಿ.ಸಿ.ದ್ರುವ, ಕೊಡವ ಸಮಾಜದ ಅಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಕೆಡಿಪಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.