ಸೋಮವಾರಪೇಟೆ, ಜ. ೨೦: ಹಿರಿಯ ಸಹಕಾರಿ ಧುರೀಣ ಹಾಗೂ ಭಾರತೀಯ ಜನತಾ ಪಾರ್ಟಿಯ ಮಾಜಿ ಮಂಡಲ ಅಧ್ಯಕ್ಷ ಕೊಮಾರಪ್ಪ ಅವರ ನಿಧನಕ್ಕೆ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಸಂತಾ ಸಭೆ ನಡೆಯಿತು.

ಸಭೆಯಲ್ಲಿ ಕೊಮಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಮಾಜೀ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಹಕಾರ ಕ್ಷೇತ್ರದಲ್ಲಿ ನಿಯಮ ಮೀರದ ಹಿರಿಯ ಸಹಕಾರಿಯಾಗಿದ್ದ ಕೊಮಾರಪ್ಪ ಅವರು, ಸುಂಟಿಕೊಪ್ಪ ಸಹಕಾರ ಸಂಘದ ಕಟ್ಟಡವನ್ನು ಶಾಸಕರ ಅನುದಾನ ಪಡೆದು ನಿರ್ಮಿಸಿದರಲ್ಲದೇ ವಾಜಪೇಯಿ ಹೆಸರು ಇಟ್ಟರು. ಇದರೊಂದಿಗೆ ವಿವಿಧೆಡೆ ಶಾಖೆ ಆರಂಭಿಸಿ ಸಹಕಾರ ಕ್ಷೇತ್ರವನ್ನು ಗಟ್ಟಿಗೊಳಿಸಿದರು ಎಂದು ಸ್ಮರಿಸಿದರು.

ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಿದ ಇವರು, ಮೂರು ಬಾರಿ ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ ಮೂರು ಬಾರಿಯೂ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ನೇರ ಹಾಗೂ ನಿಷ್ಠೂರ ನಡೆ ನುಡಿಯ ವ್ಯಕ್ತಿತ್ವ; ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡಿದವರು. ಕುಶಾಲನಗರ ಎಪಿಸಿಎಂಎಸ್ ಬೆಳವಣಿಗೆ ಹಾಗೂ ಉಳಿವಿಗೆ ಶ್ರಮಿಸಿದರು. ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದರು. ಇವರ ಅಗಲಿಕೆ ಸಮಾಜಕ್ಕೆ ನಷ್ಟ ಎಂದರು.

ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಬೆಳವಣಿಗೆಗೆ ಅವಿರತ ಶ್ರಮಿಸಿದರು. ಪ್ರತಿ ಗ್ರಾಮಗಳಿಗೆ ಪಕ್ಷದ ಸಿದ್ದಾಂತ ಹಂಚಿದ ನಾಯಕನ ಅಗಲಿಗೆ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಅಭಿಪ್ರಾಯಿಸಿದರು. ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಶಿಸ್ತು, ಪ್ರಾಮಾಣಿಕತೆಗೆ ಹೆಸರಾಗಿದ್ದ ಕೊಮಾರಪ್ಪ ಅವರು, ಎಲ್ಲರ ಸರಿ ತಪ್ಪುಗಳನ್ನು ತಿದ್ದುವ ಗುಣ ಹೊಂದಿದ್ದರು. ಇವರ ಮಾರ್ಗದರ್ಶನದಲ್ಲಿ ಹಲವಷ್ಟು ಯುವಕರು ಸಮಾಜಸೇವೆಗೆ ಬಂದಿದ್ದಾರೆ ಎಂದರು.

ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಪ್ರಮುಖರಾದ ಅಭಿಮನ್ಯುಕುಮಾರ್, ವಿ.ಕೆ. ಲೋಕೇಶ್, ಮನುಕುಮಾರ್ ರೈ, ಹೆಚ್.ಕೆ. ಮಾದಪ್ಪ, ಬಿ.ಜೆ. ದೀಪಕ್, ಮಚ್ಚಂಡ ಪ್ರಕಾಶ್, ಸೋಮೇಶ್, ಶರತ್ ಚಂದ್ರ, ಮೃತ್ಯುಂಜಯ, ದರ್ಶನ್ ಜೋಯಪ್ಪ, ಮೋಕ್ಷಿಕ್ ರಾಜ್, ಲೋಕೇಶ್ವರಿ ಗೋಪಾಲ್, ತಂಗಮ್ಮ, ಸವಿತಾ ಸತೀಶ್, ಕವಿತಾ ವಿರೂಪಾಕ್ಷ, ರೂಪ ಸತೀಶ್, ಇಂದಿರಾ ಮೋಣಪ್ಪ ಸೇರಿದಂತೆ ಇತರರು ಇದ್ದರು.

ಇದೇ ಸಂದರ್ಭ ಇತ್ತೀಚೆಗೆ ನಿಧನರಾದ ಬಿಜೆಪಿ ಮುಖಂಡ, ತಾ.ಪಂ. ಮಾಜಿ ಅಧ್ಯಕ್ಷ ಡಿ.ಎಸ್. ಪೊನ್ನಪ್ಪ, ಪ್ರಮುಖರಾದ ತೋಳೂರುಶೆಟ್ಟಳ್ಳಿಯ ಸುಬ್ಬಯ್ಯ ಅವರ ನಿಧನಕ್ಕೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.