ಪೊನ್ನಂಪೇಟೆ, ಜ. ೨೨: ಕಿರುಗೂರು ಗ್ರಾ. ಪಂ. ವ್ಯಾಪ್ತಿಯ ಕೋಟೂರು ಗ್ರಾಮದಲ್ಲಿ ಪೋರಂಗಡ ಪ್ರಥ್ವಿ ಎಂಬವರ ಎತ್ತಿನ ಮೇಲೆ ಇಂದು ಬೆಳಗಿನ ಜಾವ ಹುಲಿ ದಾಳಿ ನಡೆಸಿ ಹುಲಿ ದಾಳಿಯಿಂದ ಗಂಭೀರ ಗಾಯ ಗೊಂಡಿರುವ ಎತ್ತು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

ಕೊಟ್ಟಿಗೆಯ ಹೊರಗೆ ಕಾಫಿ ಕಣದಲ್ಲಿ ಕಟ್ಟಿ ಹಾಕಿದ್ದ ಸುಮಾರು ರೂ. ೭೦ ಸಾವಿರ ಬೆಲೆ ಬಾಳುವ ಎತ್ತಿನ ಮೇಲೆ ಬೆಳಗಿನ ಜಾವ ೩ ಗಂಟೆಯ ಸಮಯದಲ್ಲಿ ಹುಲಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ಎತ್ತು ದಷ್ಟಪುಷ್ಟವಾಗಿದ್ದ ಕಾರಣ ಹುಲಿಯ ಜೊತೆ ಹೋರಾಟ ನಡೆಸಿದ್ದು, ಎತ್ತಿನ ಕೊಂಬಿನಲ್ಲಿ ಹುಲಿಯ ಮೈಮೇಲಿನ ರೋಮಗಳು ಹಾಗೂ ರಕ್ತದ ಕಲೆ ಕಂಡು ಬಂದಿದೆ.

ಬೆಳಿಗ್ಗೆ ಎಂದಿನAತೆ ಕಾರ್ಮಿಕರು ಮೇವು ಹಾಕಲು ಬಂದು ನೋಡಿದಾಗ ಕಟ್ಟಿ ಹಾಕಿದ್ದ ಎತ್ತು ಕಾಣಿಸಲಿಲ್ಲ, ಹುಡುಕಾಟ ನಡೆಸಿದಾಗ, ಪ್ರಥ್ವಿ ಅವರ ಅಡಿಕೆ ತೋಟದ ಚರಂಡಿಯಲ್ಲಿ ಹುಲಿ ದಾಳಿಗೊಳಗಾದ ಎತ್ತು ಸಾವು ಬದುಕಿನ ನಡುವೆ ಹೋರಾಡುತ್ತಿರುವುದನ್ನು ಕಂಡು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.

ಮಾಲೀಕರು ಕೂಡಲೇ ಘಟನಾ ಸ್ಥಳಕ್ಕೆ ಬಂದು ಎತ್ತಿನ ಕುತ್ತಿಗೆ, ಹೆಗಲು, ಬೆನ್ನು ಹಾಗೂ ಎಡ ಕಾಲಿನ ಮೂಳೆ ಮುರಿದು ಎತ್ತು ಚಿಂತಾಜನಕ ಸ್ಥಿತಿಯಲ್ಲಿರುವುದನ್ನು ಕಂಡು ಪೊನ್ನಂಪೇಟೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕೆ.ಜಿ ದಿವಾಕರ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾನೂರು ಪಶು ವೈದ್ಯಾಧಿಕಾರಿ ಚಂದ್ರ ಶೇಖರ್ ಅವರನ್ನು ಕರೆಸಿ ಎತ್ತಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆರ್‌ಆರ್‌ಟಿ ಸಿಬ್ಬಂದಿಗಳ ತಂಡ ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಿ, ಹುಲಿ ಪತ್ತೆಗೆ ಕೂಂಬಿAಗ್ ನಡೆಸಿದ್ದಾರೆ.

ಈ ಬಗ್ಗೆ ರಾಸಿನ ಮಾಲೀಕರಾದ ಪ್ರಥ್ವಿ ಹಾಗೂ ಪತ್ನಿ ಸಂಗೀತ ಮಾತನಾಡಿ ನಿನ್ನೆ ದಿನ ಹುಲಿ ಇರುವ ಕುರಿತು ಡಿ.ಆರ್.ಎಫ್.ಓ ಅವರಿಗೆ ಮಾಹಿತಿ ನೀಡಿದ್ದೆವು. ಆದರೆ ಇಂದು ಬೆಳಗಿನ ಜಾವ ರಾಸಿನ ಮೇಲೆ ಹುಲಿ ದಾಳಿ ಮಾಡಿದೆ. ಉನ್ನತ ಅಧಿಕಾರಿಗಳು ಕಾಳಜಿ ವಹಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಶಾಸಕರು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಈ ಹುಲಿಯು ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದು, ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಊರಿನವರು ಭಯದಿಂದ ಮನೆಯಿಂದ ಹೊರ ಬಾರದಂತಾಗಿದೆ. ಆದಷ್ಟು ಬೇಗ ಹುಲಿಯನ್ನು ಸೆರೆಹಿಡಿದು ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

ಕಿರುಗೂರು ಗ್ರಾ. ಪಂ. ಸದಸ್ಯ ಕೊಳ್ಳಿಮಾಡ ಎಂ. ಕಾವೇರಪ್ಪ ಮಾತನಾಡಿ, ಕೋಟೂರು, ಬೆಸಗೂರು, ಕಿರುಗೂರು ಗ್ರಾಮಗಳಲ್ಲಿ ಹುಲಿ ಹೆಜ್ಜೆ ಗುರುತು ಹಾಗೂ ಹುಲಿಯನ್ನು ಜನರು ಕಂಡಿರುವುದು ಗಮನಕ್ಕೆ ಬಂದಿದೆ. ಅದೇ ಹುಲಿ ಪ್ರಥ್ವಿ ಅವರ ಎತ್ತಿನ ಮೇಲೆ ದಾಳಿ ನಡೆಸಿದೆ.

ಕಾಫಿ ಕೊಯ್ಲಿನ ಸಮಯವಾದ್ದರಿಂದ ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡುತಿದ್ದು, ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ಅರಣ್ಯ ಅಧಿಕಾರಿಗಳು ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು. ಪೊನ್ನಂಪೇಟೆ ವಲಯ ಉಪ ಅರಣ್ಯಾಧಿಕಾರಿ ದಿವಾಕರ್ ಮಾತನಾಡಿ ಈ ಪ್ರದೇಶದಲ್ಲಿ ಹುಲಿಯ ಚಲನವಲನ ಕಂಡು ಹಿಡಿಯಲು ಸಿ.ಸಿ ಕ್ಯಾಮೆರಾ ಅಳವಡಿಸುವುದರ ಜೊತೆಗೆ ಆರ್.ಆರ್.ಟಿ ಸಿಬ್ಬಂದಿಗಳ ತಂಡಗಳನ್ನು ರಚಿಸಿ ಕೂಂಬಿAಗ್ ಕೈಗೊಂಡು ಹುಲಿ ಪತ್ತೆ ಕಾರ್ಯ ಮಾಡುತ್ತೇವೆ ಎಂದರು.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ದೇಯಂಡ ಸಂತೋಷ್, ಗ್ರಾಮಸ್ಥರಾದ ಮಾಣಿಯಪಂಡ ನೀರತ್, ಅರಮಾಡ ಪ್ರಭು, ದೇಯಂಡ ಕೈಲಾಸ್, ಮನ್ನೇರ ಸತೀಶ್, ತಿತಿಮತಿ ಹಾಗೂ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್, ಡಿಆರ್‌ಎಫ್‌ಓ ಜೆ.ಕೆ. ಶ್ರೀಧರ್, ಸಂಜು ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳು ಇದ್ದರು.

- ಚನ್ನನಾಯಕ