ವೀರಾಜಪೇಟೆ, ಜ. ೨೨: ವೀರಾಜಪೇಟೆ ಪುರಸಭಾ ವ್ಯಾಪ್ತಿಯ ೯ನೇ ವಾರ್ಡ್ ವಿದ್ಯಾನಗರದ ವಿವಿಧ ಭಾಗದಲ್ಲಿ ವಿಶೇಷ ಅನುದಾನದಡಿ ಸುಮಾರು ರೂ. ೧೫ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಈ ಹಿಂದೆ ವಿದ್ಯಾನಗರದ ನಿವಾಸಿಗಳ ಬೇಡಿಕೆಯನ್ನು ಪರಿಗಣಿಸಿದ ಶಾಸಕರು ತಮ್ಮ ಅನುದಾನದಲ್ಲಿ ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲು ಸೂಚನೆ ನೀಡಿದ್ದರು.
ಉದ್ಘಾಟನೆ ಬಳಿಕ ಮಾತನಾಡಿದ ಶಾಸಕರು, ಇಲ್ಲಿನ ನಿವಾಸಿಗಳಿಗೆ ಮುಖ್ಯವಾಗಿ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು ಅದನ್ನು ಗಮನಕ್ಕೆ ತಂದಿದ್ದರು. ಅದರಂತೆ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ. ಇಲ್ಲಿನ ನಿವಾಸಿಗಳ ಇನ್ನಷ್ಟು ಬೇಡಿಕೆಗಳಿವೆ. ಕೆಲವು ಭಾಗದಲ್ಲಿ ರಸ್ತೆ ನಿರ್ಮಾಣ ಆಗಬೇಕಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಅನುದಾನ ತಂದು ಇಲ್ಲಿನ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತದೆ. ಹಂತಹAತವಾಗಿ ಅನುದಾನ ಬಿಡುಗಡೆಗೊಳಿಸಿ ಜನಪರ ಕೆಲಸ ಮಾಡುವುದಾಗಿ ಭರವಸೆಯಿತ್ತರು.
ಸ್ಥಳೀಯ ವಾರ್ಡ್ನ ಪುರಸಭೆಯ ಮಾಜಿ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ವಿದ್ಯಾನಗರಕ್ಕೆ ತೆರಳಲು ಕಚ್ಚಾ ರಸ್ತೆಯನ್ನೇ ಅವಲಂಬಿಸಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇಲ್ಲಿಗೆ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ವೀರಾಜಪೇಟೆಯ ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ರೂ. ೨೦ ಕೋಟಿ ವಿಶೇಷ ಅನುದಾನ ಒದಗಿಸಲಾಗಿದ್ದು ಅದರಲ್ಲಿ ರೂ. ೧೫ ಲಕ್ಷ ವೆಚ್ಚದಲ್ಲಿ ವಿದ್ಯಾನಗರದ ರಸ್ತೆ ಕಾಮಗಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭ ಮಾಜಿ ಸದಸ್ಯ ಮಹಮ್ಮದ್ ರಾಫಿ ಹಾಗೂ ಅಲ್ಲಿನ ನಿವಾಸಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಮನವಿ ಹಾಗೂ ಅಹವಾಲುಗಳನ್ನು ಶಾಸಕರಿಗೆ ಸಲ್ಲಿಸಿದರು.
ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಮಾಜಿ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ವೀರಾಜಪೇಟೆ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಮತೀನ್, ಪುರಸಭೆ ಮಾಜಿ ಸದಸ್ಯ ಅತಿಫ್, ಗುತ್ತಿಗೆದಾರ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ಹೇಮ್ ಕುಮಾರ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.