ತಾಯಿಯಿಂದ ಪೊಲೀಸ್ ದೂರು

ಮಡಿಕೇರಿ, ಜ. ೨೨: ಮಾನಸಿಕ ಅಸ್ವಸ್ಥನಾಗಿರುವ ಯುವಕನೋರ್ವನನ್ನು ಕೆಲವರು ಮನೆಯವರಿಗೆ ತಿಳಿಯದಂತೆ ಮನೆಯಿಂದ ಕರೆದೊಯ್ದು ಬೇರೆಡೆ ಕೆಲಸಕ್ಕೆ ಬಿಟ್ಟಿರುವ ಕುರಿತು ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಕುಶಾಲನಗರ ೩ನೇ ಬ್ಲಾಕ್ ಟೌನ್ ಕಾಲೋನಿ ನಿವಾಸಿ ೩೪ ವರ್ಷ ಪ್ರಾಯದ ಯುವಕನೋರ್ವ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಕಳೆದ ೧೩ ವರ್ಷದಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ಯುವಕ ಮನೆಯಲ್ಲೇ ಇರುತ್ತಿದ್ದ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ದಿಲೀಪ್ ಎಂಬಾತ ಕೆಲಸಕ್ಕೆಂದು ಕರೆದೊಯ್ದು ಮತ್ತೆ ವಾಪಾಸ್ಸು ಬಿಡುತ್ತಿದ್ದ ಇದನ್ನು ಪ್ರಶ್ನಿಸಿದಾಗ ದಿಲೀಪ್ ಏನೂ ಹೇಳುತ್ತಿರಲಿಲ್ಲ.

ನಂತರದಲ್ಲಿ ತಾ. ೨೨.೬.೨೦೨೫ ರಲ್ಲಿ ಮಗ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ದಿಲೀಪ್ ಹಾಗೂ ಕರಿಯಪ್ಪ ಬಡಾವಣೆಯ ಜಗದೀಶ್ ಎಂಬವರು ಆತನನ್ನು ಚಾಮರಾಜನಗರದ ಮರನಾಳಿ ಕುವೇರು ಎಂಬಲ್ಲಿ ಸೋಮಣ್ಣ ಎಂಬವರ ಬಳಿ ಕೆಲಸಕ್ಕೆ ಬಿಟ್ಟಿದ್ದಾಗಿ ತಿಳಿದು ಬಂದಿದೆ. ಈ ಬಗ್ಗೆ ದಿಲೀಪ್ ಹಾಗೂ ಜಗದೀಶ್ ಅವರ ಮೇಲೆ ಕಾನೂನು ಕ್ರಮಕ್ಕೆ ನೀಡಿದ್ದ ಪುಕಾರಿನಂತೆ ದೂರು ದಾಖಲಾಗಿದೆ.

ದೂರು ದಾಖಲಾಗಿ ಹಲವು ಸಮಯ ಕಳೆದಿದ್ದರೂ ಅಪಹರಣಕ್ಕೆ ಒಳಗಾದ ಯುವಕ ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿಸಿರುವ ಪೊಲೀಸರು ಈತನ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸುವಂತೆ ಕೋರಿ ಪ್ರಕಟಣೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿಯಿದ್ದಲ್ಲಿ ಕುಶಾಲನಗರ ಟೌನ್ ಪೊಲೀಸ್ ಠಾಣೆ (೨೭೪೩೩೩-೯೪೮೦೮೦೪೯೫೧) ಗೆ ತಿಳಿಸುವಂತೆ ಕೋರಲಾಗಿದೆ.