ಮಡಿಕೇರಿ, ಜ. ೨೩: ಕೊಡಗು ಜಿಲ್ಲೆಯ ಜನರು ಬಹುತೇಕ ಪುಷ್ಪಪ್ರಿಯರು. ತಮ್ಮ ತಮ್ಮ ಮನೆಗಳ ಒತ್ತಿನಲ್ಲಿ, ಮನೆಯಂಗಳದಲ್ಲಿ ಬಗೆ ಬಗೆಯ ಪುಷ್ಪಗಿಡಗಳನ್ನು ಬೆಳೆಯುವುದು, ಮನೆಯ ಸುತ್ತಮುತ್ತಲಿನ ಸ್ಥಳಗಳನ್ನು ಉದ್ಯಾನವನಗಳಂತೆ ಮಾಡಿಕೊಳ್ಳುವುದು ಹಲವಾರು ಮಂದಿಯ ಹವ್ಯಾಸವೂ ಆಗಿದೆ.

ಇವರುಗಳ ಅಭಿರುಚಿ ಜತೆಗೆ ಇನ್ನಿತರ ಜನರು, ಪ್ರವಾಸಿಗರನ್ನು ಆಕರ್ಷಿಸಲು, ಉತ್ತೇಜಿಸಲು ತೋಟಗಾರಿಕಾ ಇಲಾಖೆ ವತಿಯಿಂದ ವರ್ಷಂಪ್ರತಿ ಮಂಜಿನನಗರಿ ಮಡಿಕೇರಿಯ ಪ್ರಸಿದ್ಧ ತಾಣವಾದ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ.

ಇದರಂತೆ ಪ್ರಸಕ್ತ ವರ್ಷವೂ ತೋಟಗಾರಿಕಾ ಇಲಾಖೆಯು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ದೇಶದ ಗಣರಾಜ್ಯೋತ್ಸವದ ವಿಶೇಷತೆಯೂ ಆಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ತಾ. ೨೪ ರಿಂದ (ಇಂದಿನಿAದ) ಮೂರು ದಿನಗಳ ಕಾಲ ಪುಷ್ಪ ಪ್ರಿಯರ ಹೃನ್ಮನ ತಣಿಸಲು ಸಜ್ಜಾಗಿದೆ.

ಬಗೆ ಬಗೆಯ ರೀತಿಯಲ್ಲಿ ಅರಳಿ ನಿಂತಿರುವ ಪುಷ್ಪರಾಣಿ, ಹೂ ಕುಂಡಗಳ ಚೋಡಣೆ ವಿಶೇಷವಾಗಿ ಹಲವೆಡೆಗಳಿಂದ ತರಿಸಿ ಜೋಡಣೆ ಮಾಡಲಾಗಿರುವ ಸಸ್ಯ ರಾಶಿಗಳು, ವಿಶೇಷ ಅಲಂಕಾರದೊAದಿಗೆ ರಾಜಾಸೀಟು ಉದ್ಯಾನವನ ನಳನಳಿಸುತ್ತಿದ್ದು, ಜನತೆಯನ್ನು ಹೂವಿನ ಲೋಕಕ್ಕೆ ಬರಮಾಡಿಕೊಳ್ಳಲು ಕಾದು ನಿಂತಿದೆ.

ಪ್ರಸಕ್ತ ವರ್ಷದ ವಿಶೇಷ ಆಕರ್ಷಣೆಯಾಗಿರುವುದು ಕೊಡಗಿನ ಪವಿತ್ರ ಸ್ಥಳವಾದ ಭಾಗಮಂಡಲದಲ್ಲಿರುವ ಭಗಂಡೇಶ್ವರ ದೇಗುಲವನ್ನು ಪ್ರತಿಬಿಂಬಿಸುವ ಹೂವಿನಿಂದಲೇ ಸಿದ್ಧಪಡಿಸಲಾಗಿರುವ ದೇವಾಲಯದ ಕಲಾಕೃತಿ ಜತೆಗೆ, ಸ್ವಾಗತ ಕಮಾನುಗಳು, ಉದ್ಯಾನವನದ ಉದ್ದಗಲಕ್ಕೂ ನಗುನಗುತ್ತಿರುವ ಹೂಕುಂಡಗಳಲ್ಲಿ ಅರಳಿರುವ ಹೂವು, ನಡು ನಡುವೆ ಇನ್ನಿತರ ಕಲಾಕೃತಿಗಳು, ಫೋಟೋ ಕ್ಲಿಕ್ಕಿಸಿಕೊಳ್ಳಲು ಸಿದ್ಧಪಡಿಸಿರುವ ಸ್ಥಳ, ಕನ್ನಡ ಅಕ್ಷರಗಳ ಕಲಾಕೃತಿ, ಸಂಗೀತ ಕಲಾಕೃತಿ, ಗಣರಾಜ್ಯೋತ್ಸವ ವಿಶೇಷವಾಗಿ ಅಮರ್ ಜವಾನ್ ಕಲಾಕೃತಿ, ಹಾರುವ ಹಕ್ಕಿ, ಮೀನು, ಚಿಟ್ಟೆ, ಮಕ್ಕಳಿಗೆ ಮನರಂಜನೆ ಒದಗಿಸುವ ಸ್ಪೆöÊಡರ್‌ಮೆನ್, ಮಿಕ್ಕಿಮೂಸ್ ಡೊರೇಮ್ಯಾನ್ ಕಲಾಕೃತಿ, ತರಕಾರಿಗಳಲ್ಲಿನ ವಿವಿಧ ಕೆತ್ತನೆಗಳು, (ವೆಜಿಟೇಬಲ್ ಕಾರ್ವಿಂಗ್ ಜನನಾಯಕರ ಚಿತ್ರಣಗಳಂತಹ ವೈವಿಧ್ಯತೆಗಳೊಂದಿಗೆ ಫಲಪುಷ್ಪ ಪ್ರದರ್ಶನ - ೨೦೨೬ ಜನಾಕರ್ಷಿಸಲಿದೆ. ಜನರಿಗೆ ಅನುಕೂಲವಾಗುವಂತಹ ವಿವಿಧ ಮಳಿಗೆಗಳು ಗಾಂಧಿಮೈದಾನದಲ್ಲಿ ತಲೆ ಎತ್ತಿವೆ. ಯಂತ್ರೋಪಕರಣ ನರ್ಸರಿ ಗಿಡಗಳು, ಕೃಷಿ ಪರಿಕರಗಳ ಪ್ರದರ್ಶನ ಮಾರಾಟಗಳು ಖಾಸಗಿಯಾಗಿಯೂ, ಇಲಾಖಾವಾರು ಕಾರ್ಯ ನಿರ್ವಹಿಸಲಿವೆ. ಸುಮಾರು ರೂ. ೩೧ ಲಕ್ಷದಲ್ಲಿ ಈ ಬಾರಿಯ ಕಾರ್ಯಕ್ರಮ ನಡೆಯುತ್ತಿದೆ.

ವಿಶೇಷ ಗಿಡ - ಹೂಗಳು

ಉದ್ಯಾನವನದಲ್ಲಿ ಸುಮಾರು ೮ ಸಾವಿರ ಹೂ ಕುಂಡಗಳಲ್ಲಿ ವಿವಿಧ ತಳಿಯ ಹೂಗಳಿವೆ. ಬೆಡ್‌ಗಳಲ್ಲಿ ವಿವಿಧ ಜಾತಿಯ ಹೂಗಳಾದ ಸಾಲ್ವಿಯ, ಸೇವಂತಿಗೆ, ಚೆಂಡುಹೂ, ಜೇಸಿಯಾ ಥಯಾಂಥಸ್, ಇಂಪೇಷಿಯನ್ಸ್, ವಿಹಾ ರೋಸಿಯ, ಕಾಕ್ಸ್ಕೋಂಬ್, ಡೇಲಿಯ ಇತ್ಯಾದಿಗಳನ್ನು ಬೆಳೆಯಲಾಗಿದೆ.