ಮಡಿಕೇರಿ, ಜ. ೨೫ : ಪ್ರಮುಖ ಪ್ರತಭಟನೆ, ವಿಜಯೋತ್ಸವಗಳಿಗೆ ಅವಕಾಶ ನೀಡುತ್ತಾ, ಆ ಸಂದರ್ಭದಲ್ಲಿ ವಾಹನ ಸಂಚಾರ ಸಮಸ್ಯೆಗೆ ಕಾರಣವಾಗುತ್ತಿದ್ದ ಮಡಿಕೇರಿಯ ಜನರಲ್ ತಿಮ್ಮಯ್ಯ ಸರ್ಕಲ್‌ನಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡದಿರುವ ಬಗ್ಗೆ ಚಿಂತನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದು ಮಣಿ ಹೇಳಿದ್ದಾರೆ.

“ಶಕ್ತಿ''ಯೊಂದಿಗೆ ಪ್ರತಿಕ್ರಿಯಿಸಿ ದ ಬಿಂದುಮಣಿ, ಜನರಲ್ ತಿಮ್ಮಯ್ಯ ಸರ್ಕಲ್‌ನಲ್ಲಿ ಪ್ರತಿಭಟನೆ, ಮಾನವ ಸರಪಳಿ ರಚನೆ, ವಿಜಯೋತ್ಸವದಂತಹ ಚಟುವಟಿಕೆಗಳಿಂದಾಗಿ ವಾಹನ ಸವಾರರು, ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಪೊಲೀಸರಿಗೂ ಇಂತಹ ಸಂದರ್ಭ ಸಂಚಾರ ನಿಯಂತ್ರಣಕ್ಕೆ ಕಷ್ಟವಾಗುತ್ತಿದೆ. ಜನರಲ್ ತಿಮ್ಮಯ್ಯ ಸರ್ಕಲ್ ನಲ್ಲಿಯೇ ಮೈಸೂರು - ಮಂಗಳೂರು ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳು, ಬಸ್, ಕಂಟೈನರ್‌ಗಳು ಸಾಗುವುದರಿಂದಾಗಿ ಇಲ್ಲಿ ಸಂಚಾರ ನಿಲುಗಡೆಯಾದಲ್ಲಿ ಹೆದ್ದಾರಿಯುದ್ದಕ್ಕೂ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲುವಂತಾಗುತ್ತದೆ. ಈ ನಿಟ್ಟಿನಲ್ಲಿ ತಿಮ್ಮಯ್ಯ ಸರ್ಕಲ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂಬ ಸಲಹೆ ಕೇಳಿಬಂದ ಹಿನ್ನಲೆಯಲ್ಲಿ ಪೊಲೀಸ್ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಇಲಾಖೆ ಈ ಬಗ್ಗೆ ಗಂಭೀರ ಗಮನ ನೀಡಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಪ್ರಜೆಗಳ ಹಕ್ಕಾಗಿದೆ. ಹೀಗಾಗಿ ಮಡಿಕೇರಿಯಲ್ಲಿ ಪ್ರತಿಭಟನಾಕಾರರಿಗೆ ಪ್ರತ್ಯೇಕ ಜಾಗವನ್ನು ಗುರುತಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಪ್ರತಿಭಟನೆ, ವಿಜಯೋತ್ಸವಗಳಿಗೆ ಸೂಕ್ತ ಜಾಗ ದೊರಕಿದ್ದೇ ಆದಲ್ಲಿ ಜನರಲ್ ತಿಮ್ಮಯ್ಯ ಸರ್ಕಲ್‌ನಲ್ಲಿ ವಾಹನ ಪ್ರಯಾಣಿಗರು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಘಸAಸ್ಥೆಗಳು, ನಾಗರಿಕರ ಸಹಕಾರ ಪೊಲೀಸರಿಗೆ ಅಗತ್ಯವಿದೆ ಎಂದೂ ಬಿಂದುಮಣಿ ಕೋರಿದರು. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಪ್ರತಿಭಟನೆಗಳಿಗೆ ವೇದಿಕೆ ಕಲ್ಪಿಸಿರುವಂತೆಯೇ ಪ್ರತ್ಯೇಕ ಜಾಗದ ಮೂಲಕ ಮಡಿಕೇರಿಯಲ್ಲಿಯೂ ವ್ಯವಸ್ಥೆ ಮಾಡಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.

ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ವಾಹನ ನಿಲುಗಡೆಯೂ ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಮಲ್ಟಿ ಲೆವಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ, ನಗರಸಭೆಯೊಂದಿಗೆ ಪೊಲೀಸ್ ಇಲಾಖೆ ಚರ್ಚಿಸಲಿದೆ. ಪ್ರವಾಸಿ ದಟ್ಟಣೆಯ ದಿನಗಳಲ್ಲಿ ಮಡಿಕೇರಿ ಹೊರವಲಯದಲ್ಲಿ ಪ್ರವಾಸಿ ವಾಹನ ನಿಲುಗಡೆಗೊಳಿಸಿ ಅಲ್ಲಿಂದ ಸಣ್ಣ ವಾಹನಗಳಲ್ಲಿ ಪ್ರವಾಸಿಗರನ್ನು ನಗರದೊಳಕ್ಕೆ ಕರೆತರುವ ನಿಟ್ಟಿನಲ್ಲಿಯೂ ಸಲಹೆಗಳು ಕೇಳಿಬಂದಿದ್ದು ಈ ನಿಟ್ಟಿನಲ್ಲಿಯೂ ಕೊಡಗು ಪೊಲೀಸ್ ಇಲಾಖೆ ಸಾಧಕ ಬಾಧಕಗಳನ್ನು ಗಮನಿಸುತ್ತಿದೆ ಎಂದರು.

ಕೊಡಗಿನಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಜಿಲ್ಲೆಯ ವಿವಿಧ ಸಂಘಸAಸ್ಥೆಗಳೂ ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು. ಕೊಡಗು ಜಿಲ್ಲೆಯನ್ನು ಡ್ರಗ್ ಮುಕ್ತ ಕೊಡಗನ್ನಾಗಿ ಪರಿವರ್ತಿಸಲು ಪ್ರತಿಯೋರ್ವರೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆಯೂ ಬಿಂದುರಾಣಿ ಮನವಿ ಮಾಡಿದರು.

ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣವಾಗಿ ೫೨ ವರ್ಷಗಳೇ ಕಳೆದಿದ್ದು, ಹಲವಾರು ವರ್ಷಗಳಿಂದ ಈ ವೃತ್ತದ ಸುತ್ತಲೂ ಪ್ರತಿಭಟನೆ, ವಿಜಯೋತ್ಸವ, ಮಾನವ ಸರಪಳಿ ಮುಂತಾದ ಚಟುವಟಿಕೆಗಳು ನಡೆಯುತ್ತಲೇ ಇದೆ. ಇಂಥ ಸಂದರ್ಭ ಕೆಲವಾರು ನಿಮಿಷಗಳ ಕಾಲ ವೃತ್ತದ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಲುಗಡೆಯಾಗಿ ವಾಹನ ಪ್ರಯಾಣಿಕರು ಹಿಡಿಶಾಪ ಹಾಕುತ್ತಾ ಕಾಯುವಂತಾಗುತ್ತದೆ. ದೂರದೂರಿನ ಪ್ರಯಾಣಿಕರಂತೂ ನಿಗದಿತ ಸಮಯದಲ್ಲಿ ತಲುಪಬೇಕಾದ ಸ್ಥಳ ತಲುಪಲಾಗದೇ ಸಮಸ್ಯೆ ಎದುರಿಸುವಂತಾಗುತ್ತದೆ.ಇದೀಗ ಸಾರ್ವಜನಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಲ್ಲಿ ವಾಹನ ಸಂಚಾರ ಸಮಸ್ಯೆ ಬಹುತೇಕ ನಿವಾರಣೆಯಾಗಲು ಕಾರಣವಾಗಲಿದೆ.

- ಅನಿಲ್ ಹೆಚ್.ಟಿ.