ಮುಳ್ಳೂರು, ಜ. ೨೫: ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಅವಶ್ಯಕತೆ ಇದ್ದು ಪ್ರತಿ ತಿಂಗಳು ರೋಗಿಗಳಿಗೆ ೫೦೦ ರಿಂದ ೬೦೦ ಲೀಟರ್‌ನಷ್ಟು ರಕ್ತ ಕೊಡುವ ಅವಶ್ಯಕತೆ ಇದೆ. ಹೆಚ್ಚಾಗಿ ರಕ್ತದಾನ ಶಿಬಿರಗಳು ನಡೆಯುವುದರಿಂದ ಅಷ್ಟೇ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಹೇಳಿದರು.

ಅವರು ಸಮೀಪದ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಡಿಕೇರಿ ರಕ್ತನಿಧಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಂಘ ಸಂಸ್ಥೆಗಳಿAದ ನಿರಂತರ ವಾಗಿ ರಕ್ತದಾನ ಶಿಬಿರಗಳು ನಡೆಯುವುದರಿಂದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆಯನ್ನು ನೀಗಿಸಬಹುದು. ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಆರೋಗ್ಯವೃದ್ಧಿಯ ಮೂಲಕ ರಕ್ತದಾನಿಗೆ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಒಬ್ಬ ರೋಗಿಯ ಜೀವ ಉಳಿಸುವಂತೆ ಮನವಿ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಮಾತನಾಡಿ, ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಂಘ-ಸAಸ್ಥೆಗಳು ಮುಂದೆ ಬರಬೇಕು. ರೋಟರಿ ಸಂಸ್ಥೆ ವರ್ಷದಲ್ಲಿ ಎರಡು ಬಾರಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣಸ್ವಾಮಿ, ರೋಟರಿ ಕ್ಲಬ್ ಸಮಾಜಸೇವೆಯ ಜೊತೆಯಲ್ಲಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ರೋಟರಿ ಸಂಸ್ಥೆಯು ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯ ಇಲಾಖೆಗೆ ಸಹಕರಿಸುತ್ತಿದೆ. ಮುಂದಿನ ದಿನದಲ್ಲಿ ವರ್ಷದಲ್ಲಿ ಎರಡು ಬಾರಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ವಲಯ ಸೇನಾನಿ ಎ.ಎಸ್. ರಾಮಣ್ಣ, ರೋಟರಿ ಕ್ಲಬ್ ಕಾರ್ಯದರ್ಶಿ ಕಿರಣ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್‌ಕುಮಾರ್, ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು.