ಮಡಿಕೇರಿ, ಜ. ೨೫: ರೆಡ್‌ಕ್ರಾಸ್ ಸಂಸ್ಥೆಯು ವಿಶ್ವದಲ್ಲಿ ಮಾನವೀಯ ಧರ್ಮವನ್ನು ಪ್ರಚುರಪಡಿಸುವ ಮೂಲಕ ವಿಶ್ವಶಾಂತಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಲಕ್ಷಾಂತರ ಮಂದಿಗೆ ರೆಡ್‌ಕ್ರಾಸ್ ನೆರವನ್ನು ವಿಶ್ವವ್ಯಾಪಿ ಒದಗಿಸುತ್ತಾ ಬಂದಿದ್ದು ಕೊಡಗಿನಲ್ಲಿಯೂ ರೆಡ್‌ಕ್ರಾಸ್‌ಗೆ ಹೆಚ್ಚಿನ ಸದಸ್ಯರು ಸೇರ್ಪಡೆಯಾಗಬೇಕೆಂದು ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಬಿ. ಭಾಸ್ಕರ ರಾವ್ ಕರೆ ನೀಡಿದರು.

ನಗರದ ರೆಡ್‌ಕ್ರಾಸ್ ಭವನಕ್ಕೆ ಭೇಟಿ ನೀಡಿದ ಭಾಸ್ಕರರಾವ್ ಸದಸ್ಯರನ್ನುದ್ದೇಶಿಸಿ ಮಾತನಾಡಿ, ಯಾವುದೇ ದೇಶಗಳ ನಡುವೆ ಅಶಾಂತಿಯುತ ವಾತಾವರಣ ಪರಿಸ್ಥಿತಿ ಉಧ್ಬವಿಸಿದಾಗ ರೆಡ್‌ಕ್ರಾಸ್ ಪ್ರಮುಖರು ಅಂತಹ ದೇಶಗಳ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಕ್ರಿಯರಾಗುತ್ತಾರೆ. ವಿಶ್ವದಲ್ಲಿ ಶಾಂತಿ ಕಾಪಾಡುವುದೇ ರೆಡ್‌ಕ್ರಾಸ್‌ನ ಪ್ರಮುಖ ಉದ್ದೇಶವಾಗಿದೆ.

ಸಾಕಷ್ಟು ಅನುದಾನ ರೆಡ್‌ಕ್ರಾಸ್‌ನಲ್ಲಿ ಜನೋಪಯೋಗಿ ಕಾರ್ಯಗಳಿಗೆ ಲಭಿಸುತ್ತಿದ್ದು ಇದನ್ನು ಕೊಡಗಿನಲ್ಲಿ ಪ್ರಕೃತ್ತಿ ವಿಕೋಪದಂಥ ಪ್ರತಿಕೂಲ ದಿನಗಳಲ್ಲಿ ಸದುಪಯೋಗ ಮಾಡಬೇಕೆಂದೂ ಭಾಸ್ಕರ್ ರಾವ್ ಸಲಹೆ ನೀಡಿದರು. ಕೊಡಗಿನ ಸ್ಥಳೀಯ ಸಂಸ್ಥೆಗಳಿAದ ರೆಡ್‌ಕ್ರಾಸ್‌ಗೆ ಲಭಿಸಬೇಕಾದ ವಾರ್ಷಿಕ ಚಂದಾ ಹಣವನ್ನು ವಿಳಂಬ ರಹಿತವಾಗಿ ಪಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದೂ ಅವರು ಸೂಚಿಸಿದರು.

ಕೊಡಗಿನಲ್ಲಿ ತಾವು ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ದಿನಗಳು ತನ್ನ ಜೀವನದಲ್ಲಿಯೇ ಸ್ಮರಣೀಯವಾಗಿದೆ ಎಂದು ಹೇಳಿದ ಭಾಸ್ಕರರಾವ್, ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಸಂಚಾರ ನಿಯಂತ್ರಣ ಸಂಬAಧ ಈಗಲೇ ಎಚ್ಚೆತ್ತುಕೊಂಡು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಚಾರ ಸಮಸ್ಯೆಯ ಜೊತೆಗೆ ಪ್ರವಾಸಿಗರೂ ಮಡಿಕೇರಿಯಿಂದ ದೂರವಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದೂ ಕಿವಿಮಾತು ಹೇಳಿದರು.

ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಕೊಡಗಿನಲ್ಲಿ ಮಾದಕ ವ್ಯಸನಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದ್ದು ರೆಡ್‌ಕ್ರಾಸ್ ಮೂಲಕ ಮಾದಕ ವ್ಯಸನ ಪೀಡಿತರನ್ನು ಚಟಮುಕ್ತ ಮಾಡುವಂತಹ ಕಾರ್ಯಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದರು. ಕಳೆದ ೨೦ ದಿನಗಳಿಂದ ಕೊಡಗಿನ ಪ್ರತೀ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿ ಆಯಾ ಗ್ರಾಮ ವ್ಯಾಪ್ತಿಯಲ್ಲಿನ ಕಾನೂನು ಸಮಸ್ಯೆಗಳನ್ನು ತಿಳಿದುಕೊಂಡು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎಂದೂ ಅವರು ನುಡಿದರು.

ರೆಡ್‌ಕ್ರಾಸ್ ಕೊಡಗು ಘಟಕದ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ರೆಡ್ ಕ್ರಾಸ್ ನಲ್ಲಿ ೩೫೦ ಸದಸ್ಯರಿದ್ದು ಮುಂದಿನ ದಿನಗಳಲ್ಲಿ ಸೋಮವಾರಪೇಟೆ, ವೀರಾಜಪೇಟೆಯಲ್ಲಿಯೂ ಘಟಕ ಪ್ರಾರಂಭಿಸಿ ಸದಸ್ಯತ್ವವನ್ನು ಹೆಚ್ಚಿಸಲಾಗುತ್ತದೆ. ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನೂ ಶೀಘ್ರದಲ್ಲಿಯೇ ಆಯೋಜಿಸಲಾಗುತ್ತದೆ. ಮಳೆಗಾಲದಲ್ಲಿ ರೆಡ್ ಕ್ರಾಸ್ ಭವನದಲ್ಲಿ ಕಾಳಜಿ ಕೇಂದ್ರದ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತಿದೆ. ಈ ಭವನದ ಮೇಲಂತಸ್ತಿನ ನಿರ್ಮಾಣ ಕಾರ್ಯವನ್ನು ಈ ವರ್ಷದಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದೂ ಅವರು ಹೇಳಿದರು.

ರೆಡ್‌ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಅನಿಲ್ ಹೆಚ್.ಟಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಖಜಾಂಚಿ ಪ್ರಸಾದ್ ಗೌಡ ವೇದಿಕೆಯಲ್ಲಿದ್ದರು. ರೆಡ್‌ಕ್ರಾಸ್ ಪ್ರಮುಖರಾದ ಎಸ್. ಸಿ. ಸತೀಶ್, ಮಧುಕರ್, ಉತ್ತಯ್ಯ, ಸತೀಶ್ ರೈ, ವಿಜಯ್ ರೈ, ವಸಂತ್, ಪ್ರಭಾಕರ್, ಲೋಕೇಶ್ ಹಾಜರಿದ್ದರು.