ಕುಶಾಲನಗರ, ಜ. ೨೫: ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ದರ್ಶನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಉಚಿತ ಅಧ್ಯಯನ ಪ್ರವಾಸಕ್ಕೆ ಕುಶಾಲನಗರ ತಾಲೂಕಿನಿಂದ ಹೊರಟ ಶಾಲಾ ಮಕ್ಕಳಿಗೆ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಚಾಲನೆ ನೀಡಿ ಶುಭ ಕೋರಿದರು.
ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಅಧ್ಯಯನ ಪ್ರವಾಸಕ್ಕೆ ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಏರ್ಪಡಿಸಿದ್ದ ಸರ್ಕಾರಿ ಬಸ್ ನಲ್ಲಿ ತೆರಳಿದ ಪ್ರವಾಸ ತಂಡದ ಪಯಣಕ್ಕೆ ಹಸಿರು ನಿಶಾನೆ ತೋರಿಸಿ ಮಕ್ಕಳಿಗೆ ಪ್ರವಾಸಿ ಕಿಟ್ ವಿತರಿಸಿ ಮಾತನಾಡಿದರು.
೪ ದಿನಗಳ ಕಾಲದ ಪ್ರವಾಸದಲ್ಲಿ ಬೇಲೂರು - ಹಳೇಬೀಡು, ಶ್ರವಣ ಬೆಳಗೊಳ, ಚಿತ್ರದುರ್ಗ, ಹಂಪಿ, ಟಿ.ಬಿ. ಡ್ಯಾಂ, ಗೋಕರ್ಣ, ಮುರುಡೇಶ್ವರ, ಉಡುಪಿ ಮತ್ತಿತರ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲಾಗುವುದು.