ಸೋಮವಾರಪೇಟೆ, ಜ. ೨೫: ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಹಾಗೂ ಬೈಕ್ ಮೇಲೆ ಕಾಡಾನೆಯೊಂದು ದಿಢೀರ್ ಧಾಳಿ ನಡೆಸಿದ ಪರಿಣಾಮ ವಾಹನಗಳು ಜಖಂಗೊAಡು ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ನಿನ್ನೆ ರಾತ್ರಿ ಸಮೀಪದ ಕಾಜೂರು ಗ್ರಾಮದಲ್ಲಿ ನಡೆದಿದೆ.

ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಮಾದಾಪುರ ನಿವಾಸಿ ರುದ್ರಕುಮಾರ್ ಅವರು ನಿನ್ನೆ ರಾತ್ರಿ ೮ ಗಂಟೆ ಸುಮಾರಿಗೆ ಪರಿಚಿತರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಸ್ನೇಹಿತರೊಂದಿಗೆ ಕಾರಿನಲ್ಲಿ ಮಾದಾಪುರದಿಂದ ಸೋಮವಾರಪೇಟೆಗೆ ತೆರಳುತ್ತಿದ್ದಾಗ, ಕಾಜೂರು ಬಳಿಯಲ್ಲಿ ಮಾರ್ಗ ಮಧ್ಯದಲ್ಲಿ ಕಾಡಾನೆ ಧಾಳಿ ನಡೆಸಿದೆ.

ಪರಿಣಾಮ ಕಾರಿನ ಮುಂಭಾಗ ಜಖಂಗೊAಡಿದ್ದು, ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಸಂದರ್ಭ ಪಟ್ಟಣದಿಂದ ಐಗೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಕದ್ರೇಶ್ ಅವರು ಆಗಮಿಸಿದ್ದು, ಕಾಡಾನೆಯು ಇವರು ಚಾಲಿಸುತ್ತಿದ್ದ ಬೈಕ್ ಮೇಲೆ ಧಾಳಿ ನಡೆಸಿದೆ.

ಕದ್ರೇಶ್ ಅವರು ಬೈಕ್ ಸಹಿತ ಚರಂಡಿಗೆ ಉರುಳಿ ಬಿದ್ದಿದ್ದಾರೆ. ಘಟನೆಯ ಸಂದರ್ಭ ಕಾರಿನೊಳಗಿದ್ದವರು ಜೋರಾಗಿ ಕಿರುಚಿಕೊಂಡಿದ್ದು, ಗಾಬರಿಗೊಂಡ ಕಾಡಾನೆ ಅರಣ್ಯದೊಳಗೆ ತೆರಳಿದೆ.

ಕಾಡಾನೆಯ ದಾಳಿಯಿಂದಾಗಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೈಕ್ ಜಖಂಗೊAಡಿದೆ. ವಿಷಯ ತಿಳಿದ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಗಾಯಾಳುಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಎಚ್ಚರಿಗೆ ಅಗತ್ಯ: ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು ೮ ಕಾಡಾನೆಗಳ ಹಿಂಡು ಪ್ರತಿದಿನ ಸಂಚರಿಸುತ್ತಿದ್ದು, ಕೃಷಿ ಫಸಲು ಹಾನಿಗೊಳಿಸುತ್ತಿವೆ. ೨ ಮರಿಯಾನೆ ಸೇರಿದಂತೆ ಒಟ್ಟು ೮ ಆನೆಗಳ ಗುಂಪು ಯಡವನಾಡು, ಐಗೂರು, ಕಾಜೂರು ಭಾಗದಲ್ಲಿ ಓಡಾಡುತ್ತಿದೆ. ಪ್ರತಿದಿನ ರಾತ್ರಿ ೭ ರಿಂದ ೮ರ ಸುಮಾರಿಗೆ ಅರಣ್ಯದಿಂದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟಕ್ಕೆ ತೆರಳುವ ಕಾಡಾನೆಗಳು, ಮಾರನೇ ದಿನ ಬೆಳಿಗ್ಗೆ ೬ ರಿಂದ ೮ರ ಜಾವದಲ್ಲಿ ಮತ್ತೆ ಅರಣ್ಯಕ್ಕೆ ತೆರಳುತ್ತಿವೆ.

ನಿನ್ನೆ ದಿನ ರಾತ್ರಿ ೫ ಆನೆಗಳು ತೋಟಕ್ಕೆ ತೆರಳಿದ್ದು, ಮೂರು ಆನೆಗಳು ಹೊರ ಭಾಗದಲ್ಲಿ ಉಳಿದುಕೊಂಡಿವೆ. ಈ ಆನೆಗಳು ತೆರಳುವ ಸಂದರ್ಭ ವಾಹನಗಳು ಆಗಮಿಸಿದ್ದರಿಂದ ಒಂದು ಆನೆ ಗಾಬರಿಗೊಂಡು ಧಾಳಿ ನಡೆಸಿದೆ ಎಂದು ಅರಣ್ಯ ಇಲಾಖಾ ಸಿಬ್ಬಂದಿ ತಿಳಿಸಿದ್ದಾರೆ.

ಇದೀಗ ಕಬ್ಬಿಣ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಐಗೂರು ಭಾಗದಲ್ಲಿ ವಾಹನಗಳ ಸಂಚಾರದ ಮಾರ್ಗದಲ್ಲಿ ಬದಲಾವಣೆಯಾಗಿದೆ. ಎಲ್ಲಾ ವಾಹನಗಳು ಕಾಜೂರು ಗ್ರಾಮದ ಮೂಲಕವೇ ತೆರಳಬೇಕಿವೆ. ಈ ಮಾರ್ಗದಲ್ಲಿ ಆನೆಗಳ ಓಡಾಟ ಹೆಚ್ಚಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.

ಘಟನಾ ಸ್ಥಳಕ್ಕೆ ಎಸಿಎಫ್ ಗೋಪಾಲ್, ಆರ್‌ಎಫ್‌ಓ ಶೈಲೇಂದ್ರಕುಮಾರ್, ಬೇಳೂರು ಡಿಆರ್‌ಎಫ್‌ಓ ಪ್ರಶಾಂತ್, ಹುದುಗೂರು ಡಿಆರ್‌ಎಫ್‌ಓ ಲೋಹಿತ್ ಸೇರಿದಂತೆ ಇತರರು ಭೇಟಿ ಪರಿಶೀಲನೆ ನಡೆಸಿದ್ದಾರೆ.