ಮಡಿಕೇರಿ, ಜ. ೨೫: ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವ ಮತದಾರರು ಚುನಾವಣಾ ಗುರುತಿನ ಚೀಟಿ ಪಡೆಯುವ ಮೂಲಕ ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತ ಹಕ್ಕು ಚಲಾಯಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ. ಸೋಮಶೇಖರ್ ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ವತಿಯಿಂದ ಭಾನುವಾರ ನಡೆದ ರಾಷ್ಟಿçÃಯ ಮತದಾರರ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಯನ್ನು ಹಬ್ಬ ಎಂದು ಕರೆಯುತ್ತೇವೆ. ಆ ದಿಸೆಯಲ್ಲಿ ಪ್ರಜಾಪ್ರಭುತ್ವದ ಚುನಾವಣಾ ಹಬ್ಬದಲ್ಲಿ ಅರ್ಹರೆಲ್ಲರೂ ತಪ್ಪದೆ ಮತ ಹಕ್ಕು ಚಲಾಯಿಸಬೇಕು.

ಯಾವುದೇ ಕಾರಣಕ್ಕೂ ಹಿಂಜರಿಯದೆ, ಪ್ರಜಾಪ್ರಭುತ್ವ ರಾಷ್ಟçವನ್ನು ಬಲಪಡಿಸುವತ್ತ ಗಮನ ಹರಿಸಬೇಕು. ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಲ್ಲಿ ಚುನಾವಣಾ ಆಯೋಗವು ಸಾಕಷ್ಟು ಸುಧಾರಣೆಗಳನ್ನು ತಂದಿದ್ದು, ಮತದಾನದ ಮಹತ್ವ ಕುರಿತು ಸ್ವೀಪ್ ಕಾರ್ಯಕ್ರಮ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತದೆ. ನಮೂನೆ ೬, ೭ ಮತ್ತು ೮ ರಂತೆ ಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದು ಹಾಕುವುದು ಅಥವಾ ಸ್ಥಳಾಂತರಕ್ಕೆ ಅವಕಾಶವಿದ್ದು, ಇದನ್ನು ಅರ್ಹರು ಬಳಸಿಕೊಳ್ಳುವಂತಾಗಬೇಕು ಎಂದು ಎಸ್.ಜೆ. ಸೋಮಶೇಖರ್ ಹೇಳಿದರು.

ಭಾರತ ಚುನಾವಣಾ ಆಯೋಗವು ಮತದಾನ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ ರೂಪಿಸಿದೆ, ಆ ನಿಟ್ಟಿನಲ್ಲಿ ಯುವ ಜನರು ಮತಹಕ್ಕು ಚಲಾಯಿಸುವ ಮೂಲಕ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ರಾಷ್ಟ್ರೀಯ ಮತದಾರರ ದಿನಕ್ಕೆ ಚಾಲನೆ ನೀಡಿ ಮಾತನಾಡಿ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಸಂವಿಧಾನ ರಾಷ್ಟçವಾಗಿದೆ. ರಾಷ್ಟçವು ಶೇ.೬೫ ಕ್ಕೂ ಹೆಚ್ಚು ಯುವ ಮತದಾರರನ್ನು ಹೊಂದಿದ್ದು, ಯುವ ಜನರು ತಪ್ಪದೆ ಮತದಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು.

ಇತ್ತೀಚಿನ ವರ್ಷಗಳಲ್ಲಿ ಯುವ ಜನರು ಐಪಿಎಲ್ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಾರೆ, ಮತದಾನ ದಿನದಂದು ಪ್ರವಾಸ ತೆರಳುತ್ತಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವೇ ಎಂಬ ಬಗ್ಗೆ ಪ್ರತಿಯೊಬ್ಬರೂ ಅವಲೋಕಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ೧೮ ವರ್ಷ ಪೂರ್ಣಗೊಂಡ ನಂತರ ಮೊದಲ ಬಾರಿಗೆ ಚುನಾವಣಾ ಗುರುತಿನ ಚೀಟಿ ಪಡೆದಾಗ ಒಂದು ರೀತಿಯ ರೋಮಾಂಚನವಾಗಿತ್ತು ಎಂದು ಸ್ಮರಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಮತದಾನ ಮಾಡುವಾಗ ಎಚ್ಚರ ವಹಿಸಬೇಕು. ಯಾರ ಪ್ರಭಾವಕ್ಕೂ ಒಳಗಾಗದೆ ಮತದಾನ ಮಾಡುವುದು ಅರ್ಹರೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕುಗ್ರಾಮಗಳಲ್ಲಿಯೂ ಸಹ ಹೆಚ್ಚಿನ ಮತದಾನ ಆಗಬೇಕು. ಮತದಾನದಲ್ಲಿ ಖುಷಿಯಿಂದ ಭಾಗವಹಿಸಿ, ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿದರು.

೧೮ ವರ್ಷ ತುಂಬಿದ ಹೊಸ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ಇದೇ ಸಂದರ್ಭ ಗಣ್ಯರು ವಿತರಿಸಿದರು.

ರಾಷ್ಟಿçÃಯ ಮತದಾರರ ದಿನದ ಪ್ರಯುಕ್ತ ಪ್ರೌಢಶಾಲಾ, ಪದವಿ ಪೂರ್ವ ಮತ್ತು ಪದವಿ ಹಂತದ ವಿದ್ಯಾರ್ಥಿಗಳಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬೂತ್ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಕಿಟ್ ವಿತರಿಸಲಾಯಿತು.

ತಹಶೀಲ್ದಾರ್ ಆರ್. ಶ್ರೀಧರ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಶರ್ಮಿಳ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಶಿರಸ್ತೆದಾರರಾದ ಮಧುಕರ, ಮಹೇಶ್, ಚಂದ್ರಶೇಖರ್, ಅನಿಲ್ ಕುಮಾರ್ ಇತರರು ಇದ್ದರು.

ಭಾಗಮಂಡಲ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ. ದಿವಾಕರ ನಿರೂಪಿಸಿದರು, ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿಯರು ರಾಷ್ಟçಗೀತೆ ಮತ್ತು ನಾಡಗೀತೆ ಹಾಡಿದರು, ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಬಿಂದು ವಂದಿಸಿದರು.