ಮಡಿಕೇರಿ, ಜ. ೨೬: ಮೈತ್ರಿ ಪೊಲೀಸ್ ಸಮುದಾಯ ಭವನದ ಸಮೀಪ ನೂತನ ಪೊಲೀಸ್ ವಸತಿ ಗೃಹ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಎನ್.ಎಸ್. ಭೋಸರಾಜು, ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುವ ಪೊಲೀಸರಿಗೆ ವಸತಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಾಗಿ ಬದುಕುವಲ್ಲಿ ಪೊಲೀಸರ ಶ್ರಮ ಹೆಚ್ಚಿನದ್ದಾಗಿದೆ. ಆ ದಿಸೆಯಲ್ಲಿ ಪೊಲೀಸ್ ಇಲಾಖೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು.

ಈ ಹಿಂದೆ ಎಸ್ ಪಿ ಆಗಿದ್ದವರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಅದೇ ರೀತಿ ತಾವು ಸಹ ಜನಪರವಾಗಿ ಕೆಲಸ ಮಾಡಬೇಕು. ಶಾಂತಿ, ಸುವ್ಯವಸ್ಥೆಗೆ ಒತ್ತು ನೀಡಬೇಕು ಎಂದು ಸಚಿವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯ ನಿಷ್ಠೆಯನ್ನು ಮೆಚ್ಚಬೇಕಿದೆ. ಸಮಾಜದ ರಕ್ಷಣೆಗೆ ಪೊಲೀಸರು ಇದ್ದರೆ, ಪೊಲೀಸರ ರಕ್ಷಣೆಗೆ ಸಮಾಜ ಇರಲಿದೆ ಎಂದು ಡಾ.ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊಲೀಸರಿಗೆ ಮಡಿಕೇರಿ ನಗರದಲ್ಲಿ ಇನ್ನೂ ೫೦ ವಸತಿ ಗೃಹ ಬೇಕಿದ್ದು, ಆ ನಿಟ್ಟಿನಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರ ಗಮನ ಸೆಳೆದು ವಸತಿ ಗೃಹ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಜತೆಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.ಸುಂಟಿಕೊಪ್ಪದಲ್ಲಿ ೨.೫೦ ಕೋಟಿ ರೂ ವೆಚ್ಚದಲ್ಲಿ ಪೊಲೀಸರ ವಸತಿ ಗೃಹ ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಗೃಹ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಡಾ.ಮಂತರ್ ಗೌಡ ಅವರು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ನಗರಸಭಾ ಅಧ್ಯಕ್ಷೆ ಕಲಾವತಿ, ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ನಗರಸಭಾ ಸದಸ್ಯ ಅಪ್ಪಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ. ದಿನೇಶ್ ಕುಮಾರ್ ಪಾಲ್ಗೊಂಡಿದ್ದರು.

ಪೊಲೀಸ್ ಗೃಹ-೨೦೨೫ ಯೋಜನೆಯ ೫ನೇ ಹಂತದ ಭಾಗವಾಗಿದ್ದು, ೨-ಃಊಏಯ ೧೨ ಸಿಬ್ಬಂದಿಗಳ ವಸತಿಗೃಹ, ೬ ಅಧಿಕಾರಿಗಳ ನೂತನ ಪೊಲೀಸ್ ವಸತಿ ಗೃಹ ಕಟ್ಟಡದ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ರೂ. ೫,೩೦,೦೦,೦೦೦ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.