ಮಡಿಕೇರಿ, ಜ. ೨೬: ಸರಕಾರದ ಸೌಲಭ್ಯ ಬಳಸಿಕೊಂಡು ಸವಿತಾ ಸಮಾಜದವರು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ನಡೆದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮ ಸಮಾಜ ನಿರ್ಮಾಣ ಆಗುವವರೆಗೆ ಸರ್ಕಾರದ ಮೀಸಲಾತಿ ಸೌಲಭ್ಯ ಪಡೆದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕು. ರಾಷ್ಟçದ ಎಲ್ಲೆಡೆ ಇರುವ ಸವಿತಾ ಸಮಾಜದವರು ವೃತ್ತಿಯ ಜೊತೆ ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಬೇಕು ಎಂದರು.
ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಸಮಾಜ ಮತ್ತು ಸಮಾಜದ ಜನರು ಸುಂದರವಾಗಿ ಇರುವಲ್ಲಿ ಸವಿತಾ ಸಮಾಜದವರ ಕೊಡುಗೆ ಅಪಾರವಾಗಿದೆ. ನಿಜಾರ್ಥದಲ್ಲಿಯೂ ಸವಿತಾ ಸಮಾಜದವರು ಸಮಾಜದ ಜನತೆಯನ್ನು ಸುಂದರವಾಗಿ ರೂಪಿಸುವಲ್ಲಿ ಕಾರಣರಾಗಿದ್ದಾರೆ. ಸವಿತಾ ಸಮಾಜದ ಬಾಂಧವರ ಕಾರ್ಯ ಇಲ್ಲದ ಸಮಾಜವನ್ನು ಊಹಿಸಲೇ ಸಾಧ್ಯವಿಲ್ಲ ಎಂದರು.
ಸವಿತಾ ಮಹರ್ಷಿಗಳು ಯುಗಪುರುಷರಾಗಿದ್ದಾರೆ ಎಂದು ಬಣ್ಣಿಸಿದ ಅನಿಲ್, ರಥಸಪ್ತಮಿಯಂದೇ ಜನಿಸಿದ ಸವಿತಾ ಮಹರ್ಷಿಗಳು, ದೇವರ ಆಯುಷ್ಕರ್ಮ ಮಾಡುವ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರಲ್ಲದೇ ನಾದಸ್ವರಕ್ಕೂ ಸವಿತಾ ಮಹರ್ಷಿಗಳ ಕೊಡುಗೆ ಅಪಾರ ಎಂದರು.
ಸವಿತಾ ಸಮಾಜದವರ ವೃತ್ತಿಯು ಆಧುನಿಕ ತಂತ್ರಜ್ಞಾನಗಳ ಸುಳಿಯಲ್ಲಿ ಸಿಲುಕಿದೆ. ಹೀಗಿದ್ದರೂ ಯಾವುದೇ ಯಂತ್ರಗಳು ಕೂಡ ವ್ಯಕ್ತಿಯ ವೃತ್ತ್ತಿ ಕೌಶಲ್ಯತೆಗೆ ಸರಿಸಾಟಿಯಾಗಲಾರದು ಎಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದೊರೇಶ್, ತಾಲೂಕು ಅಧ್ಯಕ್ಷ ಮಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿದರು. ಸವಿತಾ ಸಮಾಜದ ಮುಖಂಡರು ಇತರರು ಪಾಲ್ಗೊಂಡಿದ್ದರು.