ನಾಪೋಕ್ಲು, ಜ. ೨೭: ನಾಪೋಕ್ಲುವಿ ನಲ್ಲಿ ಇದೀಗ ವಿವಿಧ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ನಾಪೋಕ್ಲು ಶೈಕ್ಷಣಿಕವಾಗಿ ಮುಂದುವರಿದಿದೆ ಎಂದು ಗೋಣಿಕೊಪ್ಪಲಿನ ಲಯನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಪಟ್ಟಡ ಧನು ಉತ್ತಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಹಿಂದೆ ವಿದ್ಯಾರ್ಥಿಗಳಿಗೆ ಇಷ್ಟು ಅವಕಾಶ ಇರಲಿಲ್ಲ. ಈಗ ವಿಪುಲ ಅವಕಾಶ ಲಭಿಸಿದೆ. ವಿದ್ಯಾರ್ಥಿ ಗಳು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಜೊತೆ ಕೈಜೋಡಿಸಿ ಶಿಕ್ಷಣದಲ್ಲಿ ಮುಂದುವರಿಯಬೇಕು ಎಂದರು.

ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವೇದಿಕೆಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದರಿಂದ ಧೈರ್ಯ ಹಾಗೂ ಆತ್ಮವಿಶ್ವಾಸ ಗಳಿಸಿ ಕೊಳ್ಳಲು ಸಾಧ್ಯ ಎಂದರು.

ನೇತಾಜಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎಸ್ ಸುರೇಶ್ ಮಾತನಾಡಿ, ಎಕ್ಸೆಲ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಿ ಮೂಡಿ ಬರಲು ಸಾಧ್ಯವಾಗುತ್ತಿದೆ ಎಂದರು.

ಶಾಲೆಯ ಸ್ಥಾಪಕ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಯಲ್ಲಿ ನಿರ್ದೇಶಕ ರಾದ ಕುಟ್ಟಂಜೆಟ್ಟಿರ ಶರತ್, ವಿದ್ಯಾ ಸುರೇಶ್, ಮುಖ್ಯ ಶಿಕ್ಷಕರಾದ ಚೋಕಿರ ತಮ್ಮಯ್ಯ ಉಪಸ್ಥಿತರಿದ್ದರು.

ನಿರ್ದೇಶಕಿ ಭವ್ಯ ಶಾಲಾ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿದ್ಯಾರ್ಥಿನಿಯರಾದ ದುಂಧುಬಿ, ದರ್ಶ ದೇಚಮ್ಮ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ, ಪೋಷಕರು ಹಾಜರಿದ್ದರು.