ಸೋಮವಾರಪೇಟೆ, ಜ. ೨೭: ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ತಣ್ಣೀರುಹಳ್ಳ ನಿವಾಸಿ, ಸುಮಾರು ೩೮ ವರ್ಷದ ಸುನಂದ ಅವರನ್ನು ಮೊಗೇರ ಸಮಾಜದ ವತಿಯಿಂದ ಮಾನವೀಯ ದೃಷ್ಟಿಯಿಂದ ರಕ್ಷಿಸಿ ಚಿಕಿತ್ಸೆ ಒದಗಿಸಲಾಗಿದೆ.
ಸುನಂದ ಅವರು ಕಳೆದ ಕೆಲವು ದಿನಗಳಿಂದ ಸೋಮವಾರಪೇಟೆ ಪಟ್ಟಣದಲ್ಲಿ ಅಲೆದಾಡುತ್ತಾ ಬಸ್ ನಿಲ್ದಾಣದಲ್ಲಿ ಮಲಗಿಕೊಂಡಿರುವುದು ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಕೆಲವರು ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಅವರ ಫೋಟೋಗಳನ್ನು ಹಂಚಿಕೊAಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸೋಮವಾರಪೇಟೆ ಮೊಗೇರ ಸಮಾಜದ ಸದಸ್ಯರು ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಿದರು.
ಸಭೆಯ ತೀರ್ಮಾನದಂತೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಮೊಗೇರ ಸಮಾಜದ ಉಪಾಧ್ಯಕ್ಷ ಪಿ.ಕೆ. ಚಂದ್ರು, ಜಿಲ್ಲಾ ಮೊಗೇರ ಸಮಾಜದ ಸದಸ್ಯ ಕೆ.ಬಿ. ನಂದ, ಹರೀಶ್ ತಣ್ಣೀರುಹಳ್ಳ, ವಿಜಯ್ ಕಾಗಡಿಕಟ್ಟೆ, ಹರೀಶ್ ಬಿಳಕಿಕೊಪ್ಪ ಹಾಗೂ ರವಿ ಕರ್ಕಳ್ಳಿ ಅವರುಗಳು ಸುನಂದ ಅವರನ್ನು ಕುಟುಂಬದವರೊAದಿಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆತಂದರು. ಈ ಕಾರ್ಯಕ್ಕೆ ಹರೀಶ್ ಅವರ ಕಾರಿನಲ್ಲಿ ಸಾಗಣೆ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭ ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಜನಾರ್ಧನ್ ಮರಗೋಡು ಹಾಗೂ ರವಿ ಪಿ.ಎಂ. ಅವರುಗಳು ಕೈಜೋಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮಾನಸಿಕ ವಿಭಾಗದ ವೈದ್ಯ ಡಾ. ರೂಪೇಶ್ ಅವರನ್ನು ಭೇಟಿಯಾಗಿ ವಿಷಯ ವಿವರಿಸಲಾಯಿತು. ತಕ್ಷಣ ಸ್ಪಂದಿಸಿದ ಡಾ. ರೂಪೇಶ್ ಅವರು ಸಿಬ್ಬಂದಿಯ ಸಹಾಯದಿಂದ ಸುನಂದ ಅವರನ್ನು ಸ್ವಚ್ಛಗೊಳಿಸಿ ಚಿಕಿತ್ಸೆ ಆರಂಭಿಸಿದರು.
ಸುನAದ ಅವರಿಗೆ ಯಾವುದೇ ದಾಖಲಾತಿಗಳು ಇಲ್ಲದ ಹಿನ್ನೆಲೆಯಲ್ಲಿ, ಅವರು ವಿದ್ಯಾಭ್ಯಾಸ ಮಾಡಿದ ಸುಂಟಿಕೊಪ್ಪದ ಕಾನ್‌ಬೈಲ್ ಶಾಲೆಯಿಂದ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆದು ಆಸ್ಪತ್ರೆಗೆ ಸಲ್ಲಿಸಲಾಯಿತು. ಸದ್ಯ ಸುನಂದ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕೆಲವು ದಾನಿಗಳು ಹಣಕಾಸಿನ ಸಹಾಯವನ್ನು ಕೂಡ ಒದಗಿಸಿದ್ದಾರೆ. ಮೊಗೇರ ಸಮಾಜದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. - ಅಶೋಕ್, ಮಡಿಕೇರಿ