ಮಡಿಕೇರಿ. ಜ. ೨೯: ಮರಗೋಡಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಏಪ್ರಿಲ್‌ನಲ್ಲಿ ೧೦ ಕುಟುಂಬ ೧೮ ಗೋತ್ರದ ಗೌಡ ಜನಾಂಗದವರಿಗಾಗಿ “ಗೌಡ ಕುಟುಂಬ ಕಲರವ - ೨೦೨೬” ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬವಾರು ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಮತ್ತು ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಗೌಡ ಇವಿನಿಂಗ್ ಸ್ಟಾರ್ ಸಂಘದ ಅಧ್ಯಕ್ಷ ಕಟ್ಟೆಮನೆ ರೋಷನ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಮರಗೋಡಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಸುಮಾರು ೧೦೦ ರಿಂದ ೧೫೦ ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಕುಟುಂಬದ ಹೆಸರು ನೋಂದಾಯಿಸಲು ಮಾರ್ಚ್ ೩೧ ರವರೆಗೆ ಅವಕಾಶವಿರುತ್ತದೆ. ಕಳೆದ ಬಾರಿ ೧೦೩ ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿಯ ವಿಶೇಷತೆಯಾಗಿ ಕುಟುಂಬ ತಂಡದಲ್ಲಿ ಆಟಗಾರರ ಸಂಖ್ಯೆ ಕಡಿಮೆ ಇದ್ದರೆ ಮಹಿಳಾ ಆಟಗಾರರನ್ನು ಸೇರಿಸಿಕೊಂಡು ಆಡಲು ಅವಕಾಶವಿದೆ, ಈ ಬಾರಿ ಮಹಿಳಾ ಆಟಗಾರರಿಗೆ ಬೌಲಿಂಗ್ ಮಾಡಲು ಕೂಡ ಅವಕಾಶ ನೀಡಲಾಗುತ್ತಿದ್ದು, ಮಹಿಳಾ ಆಟಗಾರರಿಗೆ ಬೌಲಿಂಗ್ ಆ್ಯಕ್ಷನ್ ಕಡ್ಡಾಯವಿರುವುದಿಲ್ಲ, ಥ್ರೋ ಬೌಲಿಂಗ್ ಮಾಡಬಹುದಾಗಿದೆ.

ಪಂದ್ಯಾಟ ಏಪ್ರಿಲ್ ೧೩ರಿಂದ ಮರಗೋಡು ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟವು ಸುಮಾರು ೧೫ ದಿನಗಳ ಕಾಲ ನಡೆಯಲಿದ್ದು, ಪ್ರತಿ ದಿನ ಒಟ್ಟು ೧೦ ಪಂದ್ಯಗಳನ್ನು ನಡೆಸಲಾಗುತ್ತದೆ. ಪ್ರತಿ ಪಂದ್ಯಾಟವು ೬ ಓವರ್‌ಗಳ ಪಂದ್ಯವಾಗಿದ್ದು, ಪ್ರೀ ಕ್ವಾರ್ಟರ್ ಹಂತದ ಪಂದ್ಯಾಟವು ೮ ಓವರ್ ಹಾಗೂ ಕ್ವಾರ್ಟರ್ ಫೈನಲ್ ನಂತರದ ಎಲ್ಲಾ ಪಂದ್ಯಾಟವು ೧೦ ಓವರ್‌ಗಳಿಗೆ ಸೀಮಿತವಾಗಿರುತ್ತದೆ.ಅಲ್ಲದೇ ಫ್ರೀ ಕ್ವಾಟರ್ ಹಂತದ ನಂತರದ ಎಲ್ಲಾ ಪಂದ್ಯಗಳನ್ನು ಪವರ್ ಪ್ಲೇ ಮೂಲಕ ನಡೆಸಲಾಗುವುದು ಎಂದು ರೋಷನ್ ಹೇಳಿದರು.

ಪುರುಷರು - ಮಹಿಳೆಯರನ್ನೊಳಗೊಂಡು ಹಗ್ಗಜಗ್ಗಾಟ

ಈ ಕುಟುಂಬ ಕಲರವ ಕಾರ್ಯಕ್ರಮದಲ್ಲಿ ಏಪ್ರಿಲ್ ೨೫ ಮತ್ತು ೨೬ ರಂದು ಕುಟುಂಬವಾರು ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗಗಳು ಇರುವುದಿಲ್ಲ. ಬಹುಶಃ ಇದೇ ಪ್ರಥಮ ಬಾರಿಗೆ ಕೊಡಗಿನಲ್ಲಿ ಈ ಮಾದರಿಯ ಹಗ್ಗ ಜಗ್ಗಾಟ ಪಂದ್ಯಾಟವನ್ನು ನಡೆಸಲಾಗುತ್ತಿದ್ದು, ಭಾಗವಹಿಸುವ ಎಲ್ಲಾ ತಂಡದಲ್ಲಿ ಕಡ್ಡಾಯವಾಗಿ ಕುಟುಂಬದ ಪುರುಷರು ಹಾಗೂ ಮಹಿಳೆಯರು ಸ್ಪರ್ಧೆ ಮಾಡಬೇಕು. ಪ್ರತಿ ಕುಟುಂಬ ತಂಡದಲ್ಲಿ ೮ + ೨ ಆಟಗಾರರು ಇರಬೇಕು. ಹಗ್ಗ ಜಗ್ಗಾಟ ಸ್ಪರ್ಧೆಯ ಸಮಯದಲ್ಲಿ ಪ್ರತಿ ತಂಡದಲ್ಲಿ ನಾಲ್ಕು ಪುರುಷ ಹಾಗೂ ನಾಲ್ಕು ಮಹಿಳಾ ಸ್ಪರ್ಧಾಳುಗಳು ಸ್ಪರ್ಧೆ ಮಾಡಬೇಕಾಗುತ್ತದೆ. ಸಾಕಷ್ಟು ಸಣ್ಣ ಕುಟುಂಬಗಳು ಕುಟುಂಬವಾರು ಪಂದ್ಯಾಟಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದನ್ನು ಮನಗೊಂಡು ಅಂತಹ ಸಣ್ಣ ಕುಟುಂಬಗಳಿಗೆ ಅವಕಾಶ ನೀಡುವ ಸಲುವಾಗಿ ಈ ಮಾದರಿಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಕುಟುಂಬ ಕಲರವ ಕಾರ್ಯಕ್ರಮವನ್ನು ಸುಮಾರು ೧೫ ಲಕ್ಷ ವೆಚ್ಚದಲ್ಲಿ ಆಯೋಜನೆ ಮಾಡುತ್ತಿದ್ದು, ಒಟ್ಟು ಬಹುಮಾನದ ಮೊತ್ತ ೫ ಲಕ್ಷ ರೂಪಾಯಿಗಳಾಗಿವೆ. ಪಂದ್ಯಾಟದಲ್ಲಿ ವಿಜೇತರಾಗುವ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ಪಡೆಯುವ ತಂಡಗಳಿಗೆ ಆಕರ್ಷಕ ನಗದು ಹಾಗೂ ಟ್ರೋಫಿಯನ್ನು ಅಲ್ಲದೇ ಕ್ವಾರ್ಟರ್ ಫೈನಲ್ ಹಂತವನ್ನು ತಲುಪುವ ಪ್ರತಿ ತಂಡಕ್ಕೂ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಹಾಗೆಯೇ ವೈಯಕ್ತಿಕ ಬಹುಮಾನಗಳಾಗಿ ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಸರಣಿ ಪುರುಷೋತ್ತಮ, ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್, ಉತ್ತಮ ಕ್ಷೇತ್ರರಕ್ಷಕ, ಉತ್ತಮ ಮಹಿಳಾ ಆಟಗಾರ್ತಿ, ಉದಯೋನ್ಮುಖ ಆಟಗಾರ ಹಾಗೂ ಪ್ರತಿ ಕುಟುಂಬದ ಓರ್ವ ಉತ್ತಮ ಆಟಗಾರನಿಗೆ ಆಕರ್ಷಕ ಉಡುಗೊರೆ ನೀಡಲಾಗುವುದು. ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಮಾರ್ಚ್ ೩೧ ರ ಒಳಗಾಗಿ ನೋಂದಣಿ ಶುಲ್ಕವನ್ನು ನೀಡಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಹೆಸರನ್ನು ನೋಂದಾಯಿಸಿಕೊಳ್ಳಲು ಮಗೇರನ ರಂಜು (೮೭೬೨೨೪೯೩೧೭), ಬಿದ್ರುಪಣೆ ದೀಪು (೯೪೮೨೩೯೫೩೫೮), ಬೊಳ್ಳೂರು ಮುನ್ನ (೯೪೮೩೬೭೮೩೭೭), ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಏಪ್ರಿಲ್ ೨೦ ರ ಒಳಗಾಗಿ ಕಾಂಗೀರ ಮೋನಿಶ್ (೯೦೦೮೫೩೮೯೩೨) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ಪಂದ್ಯಾಟದ ಬಗ್ಗೆ ಹೆಚ್ಚಿನ ಮಾಹಿತಿಗೆ ಕಟ್ಟೆಮನೆ ರೋಷನ್ (೯೪೪೯೩೬೧೯೩೩) ಹಾಗೂ ಕರ್ಣಯ್ಯನ ವಿವೇಕ್ (೯೯೦೨೪೯೭೮೧೭) ಇವರನ್ನು ಸಂಪರ್ಕಿಸಬಹುದು ಎಂದು ಕಟ್ಟೆಮನೆ ರೋಷನ್ ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕರ್ಣಯ್ಯನ ವಿವೇಕ್, ಸಂಚಾಲಕರಾದ ಮಗೇರನ ರಂಜು, ಬೊಳ್ಳೂರು ಶಿವ ಪ್ರಸನ್ನ, ಸದಸ್ಯರುಗಳಾದ ಮುಕ್ಕಾಟಿ ಸೋನ, ಮುಕ್ಕಾಟಿ ಮೋನಿಶ್ ಉಪಸ್ಥಿತರಿದ್ದರು.