ಮಡಿಕೇರಿ, ಜ. ೨೯: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನವಾದ ಜನವರಿ ೨೮ ರ ದಿನವನ್ನು ಬೆಂಗಳೂರು ಕೊಡವ ಸಮಾಜದ ವತಿಯಿಂದ ಕೊಡವ ಸಾಂಸ್ಕೃತಿಕ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಈ ದಿನದಂAದು ವಸಂತ ನಗರದಲ್ಲಿರುವ ಕೊಡವ ಸಮಾಜದ ಸನಿಹದ ವೃತ್ತದಲ್ಲಿರುವ ಫೀ.ಮಾ. ಕಾರ್ಯಪ್ಪ ಅವರ ಪ್ರತಿಮೆಗೆ ಗೌರವ ನಮನ, ಪುಷ್ಪಾರ್ಚನೆಯೊಂದಿಗೆ ನಡೆಸಲಾಗುತ್ತಿದ್ದು, ಬಳಿಕ ಸಮಾಜದಲ್ಲಿ ಕಾರ್ಯಕ್ರಮ ನಡೆಸುವುದು ಈ ಸಮಾಜದಿಂದ ಜರುಗುತ್ತಿದೆ. ಇದರಂತೆ ನಿನ್ನೆ ಸಂಜೆ ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಹಾಗೂ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಸಮಾಜದ ಪ್ರಮುಖರು, ಮಾಜಿ ಸೇನಾಧಿಕಾರಿಗಳು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿರುವ ಪಾಂಡAಡ ಎಸ್. ಭೀಮಯ್ಯ ಅವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರೂ ಪಾಲ್ಗೊಂಡು ಪ್ರಮುಖರೊಂದಿಗೆ ಸೇನಾನಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಸಮಾಜದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಸುರೇಶ್ ನಂಜಪ್ಪ ಪ್ರಸ್ತುತದ ಹಾಗೂ ಮುಂದಿನ ದಿನಗಳ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೊಡಗಿನಲ್ಲಿ ಯಾರಾದರೂ ದಾನಿಗಳು ಜಾಗ ನೀಡಿದಲ್ಲಿ ಈ ಸ್ಥಳದಲ್ಲಿ ಬೆಂಗಳೂರ ಕೊಡವ ಸಮಾಜದ ಮೂಲಕ ವಿದ್ಯಾಸಂಸ್ಥೆ, ವೃದ್ಧಾಶ್ರಮ, ಸಾಂಸ್ಕೃತಿಕ ಕೇಂದ್ರ ಅಥವಾ ಹೆರಿಟೇಜ್ ಸೆಂಟರ್ ಆಗಿ ಇದನ್ನು ಪರಿವರ್ತಿಸಿ ಅಭಿವೃದ್ಧಿಪಡಿಸಲು ಸಮಾಜ ಸಿದ್ಧವಿರುವುದಾಗಿ ತಿಳಿಸಿದರು. ಅತಿಥಿಗಳಾಗಿದ್ದ ಪಾಂಡAಡ ಎಸ್. ಭೀಮಯ್ಯ ಅವರು ಸೇನೆಯ ಮಹತ್ವದ ಬಗ್ಗೆ ಮಾತನಾಡಿದರು.
ಸಾಂಸ್ಕೃತಿಕ ದಿನದ ಅಂಗವಾಗಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ವಿವಿಧ ಕೊಡವ ಸಂಘಗಳ ನಡುವೆ ಕೆಲದಿನದ ಹಿಂದೆ ಆಯೋಜಿಸಲಾಗಿದ್ದ ಕೊಡವ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಿಜೇತರಾದವರಿಂದ ಇದರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಬಾರಿಯ ಕಾರ್ಯಕ್ರಮದಲ್ಲಿ ೨೨ ಕೊಡವ ಸಂಘಗಳು ಭಾಗಿಯಾಗಿದ್ದವು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಚಿರಿಯಪಂಡ ಆಶಾ ವಿವೇಕ್, ಕಾರ್ಯದರ್ಶಿ ಬೇರೆರ ಮಧು ಅಯ್ಯಣ್ಣ, ಜಂಟಿ ಕಾರ್ಯದರ್ಶಿ ಚೊಟ್ಟೆಯಂಡ ಆರತಿ ಅಯ್ಯಮ್ಮ, ಖಜಾಂಚಿ ಚೇಮಿರ ಸಿ. ಪೊನ್ನಪ್ಪ, ಜಂಟಿ ಖಜಾಂಚಿ ಮಲ್ಲೇಂಗಡ ಎಸ್. ಮುತ್ತಣ್ಣ ಸೇರಿದಂತೆ, ಸಮಾಜದ ಮಾಜಿ ಅಧ್ಯಕ್ಷರುಗಳು, ವಿವಿಧ ಅಂಗ ಸಂಸ್ಥೆಗಳ ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು.
ಫೀ.ಮಾ. ಕಾರ್ಯಪ್ಪ ಅವರ ೧೦೦ನೇ ಜನ್ಮದಿನಾಚರಣೆಯ ಬಳಿಕ ಬೆಂಗಳೂರು ಕೊಡವ ಸಮಾಜದ ಮೂಲಕ ಜನವರಿ ೨೮ ರ ದಿನವನ್ನು ಸಾಂಸ್ಕೃತಿಕ ದಿನವನ್ನಾಗಿ ಆಚರಿಸಲಾಗುತ್ತಿದೆ.