ವೀರಾಜಪೇಟೆ, ಜ. ೨೯: ಸಮೀಪದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೆಟ್ಟ ಪ್ರದೇಶದಲ್ಲಿ ಖಾಸಗಿ ಸಂಸ್ಥೆ ನಿರ್ಮಿಸುತ್ತಿರುವ ರೆಸಾರ್ಟ್ ಹಾಗೂ ಐಷಾರಾಮಿ ವಿಲ್ಲಾಗಳ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಕಾನೂನು ಹೋರಾಟ ಅನಿವಾರ್ಯವೆಂದು ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಅಧ್ಯಕ್ಷ ಕರ್ನಲ್ ಮುತ್ತಣ್ಣ ಎಚ್ಚರಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಕುರಿತ ಮಾಹಿತಿ ಪಡೆದ ಹಲವು ಮಂದಿ, ಬಿಟ್ಟಂಗಾಲದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಮಾತನಾಡಿದರು. ೨೦೧೮ರಲ್ಲಿ ಕೊಡಗಿನಲ್ಲಿ ಭೂ ಕುಸಿತವಾಗಿ ಹಾನಿಯಾದಾಗ ಅಂದಿನ ಸರಕಾರ ಭೂ ಕುಸಿತವಾಗುವ ಬೆಟ್ಟ ಪ್ರದೇಶಗಳಲ್ಲಿ ಯಾವುದೇ ರೀತಿಯ ಕಾಮಗಾರಿ ನಿರ್ಬಂಧಿಸಿದೆ. ಈ ಬೆಟ್ಟದಲ್ಲಿಯೂ ಹಿಂದೆ ಸ್ವಲ್ಪಮಟ್ಟಿಗೆ ಭೂಕುಸಿತವಾಗಿದ್ದು, ಮುಂದೆ ಈ ಕಾಮಗಾರಿಯಿಂದ ಈ ಗ್ರಾಮವೇ ನಾಶವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಇಂದು ಶಾಂತಿಯುತ ಹೋರಾಟ ನಡೆಸಿದ್ದು ಇದಕ್ಕೆ ಅಧಿಕಾರಿಗಳು ಸ್ವಂದಿಸದಿದ್ದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಅನಿವಾರ್ಯ ಎಂದು ಕರ್ನಲ್ ಮುತ್ತಣ್ಣ ಹೇಳಿದರು.
ಜಬ್ಭೂಮಿ ಸಂಘಟನೆಯ ಪ್ರಮುಖರಾದ ರಾಜೀವ್ ಬೋಪಯ್ಯ ಮಾತನಾಡಿ, ಕೊಡಗಿನಲ್ಲಿ ನಿಯಮ ಮೀರಿ ಭೂ ಪರಿವರ್ತನೆ ಆಗುತ್ತಲೇ ಇದೆ. ಜಿಲ್ಲೆಯ ಹಲವಾರು ಕಡೆ ಇದೇ ಸ್ಥಿತಿ ಕಂಡುಬರುತ್ತಿದೆ. ಬಿಟ್ಟಂಗಾಲದಲ್ಲಿ ಬಂಡೆ ಒಡೆಯಲು ಬೆಟ್ಟದಲ್ಲಿ ಸ್ಫೋಟಕ ಬಳಸಲಾಗುತ್ತಿದೆ. ಸ್ಥಳೀಯ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭ ಪ್ರಮುಖರಾದ ನೆಲ್ಲಮಕ್ಕಡ ವಿವೇಕ್, ಅಪ್ಪಂಡೇರAಡ ಯಶ್ವಂತ್ ಕಾಳಪ್ಪ, ಪುಚ್ಚಿಮಾಡ ಬಬ್ಲು ಮತ್ತಿತರರು ಉಪಸ್ಥಿತರಿದ್ದರು.