ನಾಪೋಕ್ಲು, ಜ. ೨೮: ವಿದ್ಯಾಸಂಸ್ಥಗೆ ದಾನವಾಗಿ ಬಂದ ಜಾಗ ಬೇರೆ ಉದ್ದೇಶಕ್ಕೆ ಬಳಕೆಯಾಗಬಾರದೆಂದು ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಒತ್ತಾಯಿಸಿದರು.

ಬೇತು ಗ್ರಾಮದ ಚೆರಿಯಪರಂಬು ಗ್ರಾಮದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿದ ಶಾದಿಮಹಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಮಾತನಾಡಿದ ಕೆ.ಜಿ. ಬೋಪಯ್ಯ, ಸರ್ಕಾರದಿಂದ ಒಟ್ಟು ೪೭.೨ ಎಕರೆ ಸ್ಥಳ ಇಲ್ಲಿಯ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ. ಇಲ್ಲಿ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು, ಅಂಬೇಡ್ಕರ್ ವಸತಿ ಶಾಲೆ ಎಲ್ಲವೂ ಇದ್ದು ಒಟ್ಟು ಜಾಗ ಶಿಕ್ಷಣದ ಉದ್ದೇಶಕ್ಕೆ ಬಳಕೆಯಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಶಿಕ್ಷಣ ಸಂಸ್ಥೆಗೆ ಮೀಸಲಿಟ್ಟ ಜಾಗವನ್ನು ಶಾದಿ ಮಹಲ್ ನಿರ್ಮಾಣಕ್ಕೆ ನೀಡಿರುವುದು ಖಂಡನೀಯ. ಶಾಲೆಗೆ ದಾನವಾಗಿ ನೀಡಿದ ಸ್ಥಳ ಶಿಕ್ಷಣದ ಉದ್ದೇಶಕ್ಕೆ ಬಳಕೆಯಾಗಬೇಕು ಎಂದರು.

ಅಪ್ಪಚ್ಚು ರಂಜನ್ ಮಾತನಾಡಿ, ಶಾಲೆಗೆ ದಾನಿಗಳು ನೀಡಿದ ಜಾಗವನ್ನು ಶಾದಿ ಮಹಲ್‌ಗೆ ನೀಡಿರುವುದು ಖಂಡನೀಯ. ಎಲ್ಲಾ ಜಾತಿ, ಜನಾಂಗದವರು ವಿದ್ಯಾಭ್ಯಾಸಕ್ಕಾಗಿ ನೀಡಿದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಈ ರೀತಿ ಗೊಂದಲ ಉಂಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಜಾಗದಲ್ಲಿ ನೂರಾರು ಮರಗಳ ಹನನವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಚೆರಿಯಪರಂಬುವಿನ ಕೆಲ ಪ್ರದೇಶ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತದೆ. ನದಿಯ ಸಮೀಪ ೫೦೦ ಮೀಟರ್ ದೂರದವರೆಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಎಲ್ಲ ಆದೇಶಗಳನ್ನು ಉಲ್ಲಂಘಿಸಿ ಶಾದಿ ಮಹಲ್ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದರು. ಇದಕ್ಕೂ ಮೊದಲು ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲೆ ವಿಶಾಲ ಕುಶಾಲಪ್ಪ ಅವರಿಂದ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಳೂರು ಕಿಶೋರ್ ಕುಮಾರ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ದೇ ಸ್ಥಳದಾನಿಗಳಾದ ಕೀಕಂಡ ರಾಜಮೇದಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉದಯಶಂಕರ್ ಎನ್.ಎಸ್., ಸಮಿತಿಯ ಮಾಜಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ತಾಲೂಕು ಬಿಜೆಪಿ ಉಪಾಧ್ಯಕ್ಷ ಪಾಡಿಯಮ್ಮಂಡ ಮನುಮಹೇಶ್, ಕಾರ್ಯದರ್ಶಿ ಪೊಕ್ಕುಳಂಡ್ರ ಧನುಜ್, ಬೇತು ಬಿಜೆಪಿ ಬೂತ್ ಅಧ್ಯಕ್ಷ ಚೋಕಿರ ಅಜಿತ್, ಮುಕ್ಕಾಟಿರ ವಿನಯ್ ಸೇರಿದಂತೆ ಇನ್ನಿತರರು, ಉಪಸ್ಥಿತರಿದ್ದರು.