ಮಡಿಕೇರಿ ಜ. ೨೯ : ಗಣರಾಜ್ಯೋತ್ಸವದ ಪ್ರಯುಕ್ತ ಮಹಾರಾಷ್ಟçದ ಔರಂಗಾಬಾದ್ ನಗರದಲ್ಲಿ ಆಯೋಜಿಸಲಾಗಿದ್ದ ಸ್ಕೇಟಿಂಗ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ ಮಡಿಕೇರಿಯ ಮಂಗಳಾದೇವಿ ನಗರದ ತೋರೆರ ಯುವಾನ್ ಬೋಪಣ್ಣ (೫)ಗೆ ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಯುಎಸ್‌ಎ ಅಧಿಕೃತ ಮಾನ್ಯತೆ ನೀಡಿವೆ. ಯುವಾನ್ ಬೋಪಣ್ಣ ೧ ಗಂಟೆ ೨೬ ನಿಮಿಷ ೨೬ ಸೆಕೆಂಡುಗಳ ಕಾಲ ನಿರಂತರವಾಗಿ ಸ್ಕೇಟಿಂಗ್ ಮಾಡಿ ಅಸಾಧಾರಣ ಸಹನಾ ಶಕ್ತಿ, ಶಿಸ್ತು ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿದ್ದಾನೆ. ಆ ಮೂಲಕ ಎರಡು ವಿಶ್ವ ದಾಖಲೆ ಪ್ರಯತ್ನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ.

ಕೊಡಗು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಕೋಶಾಧಿಕಾರಿ ತೋರೆರ ಎಂ. ಮುದ್ದಯ್ಯ ಅವರ ಮೊಮ್ಮಗ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ತೋರೆರ ಎಂ. ಮುತ್ತಣ್ಣ ಮತ್ತು ರಂಜಿತಾ ಎಂ. ದಂಪತಿಯ ಪುತ್ರ ಯುವಾನ್ ಬೋಪಣ್ಣ ಟಿ. ಕಿಡ್‌ಝೀ ಪ್ರೀಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.