ಕಣಿವೆ, ಜ. ೨೯: ಕುಶಾಲನಗರ ಪುರಸಭೆಯ ೨೦೨೬-೨೭ ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಿದ್ಧತಾ ಸಭೆ ಪುರಸಭೆಯ ಆಡಳಿತಾಧಿಕಾರಿಗಳೂ ಆದ ಕೊಡಗು ಜಿಲ್ಲೆಯ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ನಗರದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಅತ್ಯಾಧುನಿಕ ಶೈಲಿಯ ಗ್ರಂಥಾಲಯ ನಿರ್ಮಾಣ ಮಾಡುವಂತೆ ನಿತಿನ್ ಮುಖ್ಯಾಧಿಕಾರಿಗೆ ಸಲಹೆ ನೀಡಿದರು. ಹಿರಿಯ ನಾಗರಿಕರು ಒಳಗೊಂಡAತೆ ಸಾರ್ವಜನಿಕರಿಗೆ ಉಪಯೋಗವಾಗುವ ಗ್ರಂಥಗಳು, ದಿನಪತ್ರಿಕೆಗಳನ್ನು ವಾಚಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಶೌಚಾಲಯ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅವರು ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಯೋಜನೆಯಡಿ ೫೫೦ ಲಕ್ಷ ರೂಗಳ ಅನುದಾನ ಪುರಸಭೆಗೆ ಬಿಡುಗಡೆಗೊಳ್ಳಲಿದೆ. ಹಾಗೆಯೇ ಡೆಲ್ಟ್ ಯೋಜನೆಯಡಿ ೫.೫೦ ಕೋಟಿ ರೂಗಳ ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನದಲ್ಲಿ ಕೊಪ್ಪ ಕಾವೇರಿ ಸೇತುವೆಯಿಂದ ತಾವರೆಕೆರೆವರೆಗೆ ಹಾಗೂ ಎಪಿಸಿಎಂಎಸ್ ಬಳಿಯ ಮಸೀದಿಯಿಂದ ಐಬಿವರೆಗೂ ಹೆದ್ದಾರಿಯ ಎರಡೂ ಬದಿ ಅಗತ್ಯ ಚರಂಡಿ, ಪಾದಚಾರಿ ರಸ್ತೆ, ವಿದ್ಯುದೀಕರಣ ಮಾಡಲಾಗುತ್ತದೆ. ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಮೇಲ್ಸೇತುವೆ ನಿರ್ಮಾಣ, ಮುಖ್ಯ ವೃತ್ತಗಳಲ್ಲಿ ಹೈ ಮಾಸ್ಟ್ ದೀಪಗಳ ಅಳವಡಿಕೆ, ವಿದ್ಯುತ್ ಚಿತಾಗಾರ, ಪ್ರತಿ ವಾರ್ಡ್ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈಗಾಗಲೇ ೨೦೨೬-೨೭ ನೇ ಸಾಲಿನಲ್ಲಿ ೨೩೬೧ ಲಕ್ಷ ರೂಗಳ ಆದಾಯ ನಿರೀಕ್ಷಿಸಲಾಗಿದ್ದು, ೨೦೮೪..೪೦ ಲಕ್ಷ ರೂಗಳ ವೆಚ್ಚದ ಪಟ್ಟಿ ಸಿದ್ಧಪಡಿಸಲಾಗಿದೆ. ನಗರದ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಿ ಆಯ್ದ ಅಭಿವೃದ್ದಿಗಳನ್ನು ಬಜೆಟ್ನಲ್ಲಿ ಸೇರಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮಾಹಿತಿ ನೀಡಿದರು. ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿನ ಆರು ಎಕರೆ ವಿಸ್ತಾರವಾದ ಭೂಪ್ರದೇಶವನ್ನು ಅನ್ಯ ಉದ್ದೇಶಗಳಿಗೆ ಬಳಸದೇ ಕುಶಾಲನಗರದ ಸಾರ್ವಜನಿಕ ಬಳಕೆಯ ದೃಷ್ಟಿಯಿಂದ ಮೀಸಲಿರಿಸಿ ಸುತ್ತಲೂ ಕಂದಕ ಅಳವಡಿಸಿ ಸಂರಕ್ಷಣೆ ಮಾಡಬೇಕು. ಬೆಳೆಯುತ್ತಿರುವ ಕುಶಾಲನಗರದಲ್ಲಿ ಹೆದ್ದಾರಿಯ ಉದ್ದಕ್ಕೂ ವೈಜ್ಞಾನಿಕವಾಗಿ ವಿದ್ಯುದೀಕರಣಗೊಳಿಸಬೇಕು. ನಗರದ ಹಿತದೃಷ್ಟಿಯಿಂದ ವಾಕ್ಯೂಮ್ ಕ್ಲೀನರ್ ಟ್ರಕ್ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಕುಡಾ ಮಾಜಿ ಅಧ್ಯಕ್ಷ ಎಂ.ಎA.ಚರಣ್ ಸಲಹೆ ನೀಡಿದರು. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯುತ್ತಿರುವ ಕುಶಾಲನಗರದಲ್ಲಿ ಆಯ್ದ ಕಡೆ ವೃತ್ತಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಆನಂದಕುಮಾರ್ ಸಲಹೆ ನೀಡಿದರು. ಕುಶಾಲನಗರದ ಬಸವೇಶ್ವರ ಬಡಾವಣೆ, ಗೊಂದಿಬಸವನಹಳ್ಳಿ ವ್ಯಾಪ್ತಿಯ ರಸ್ತೆಗಳಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಜಿ.ಬಿ.ಜಗದೀಶ್ ಹೇಳಿದರು. ಪೂನಂ ಬಡಾವಣೆಯಿಂದ ಗುಂಡೂರಾವ್ ಬಡಾವಣೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಮಾಜಿ ಸದಸ್ಯ ಡಿ.ಕೆ. ತಿಮ್ಮಪ್ಪ ಹೇಳಿದರು. ನಗರದಲ್ಲಿರುವ ಉದ್ಯಾನವನಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು. ಕಾವೇರಿ ಬಡಾವಣೆಯ ಉದ್ಯಾನವನ್ನು ಅಭಿವೃದ್ಧಿಗೊಳಿಸಬೇಕೆಂದು ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಒತ್ತಾಯಿಸಿದರು. ನಗರದ ವ್ಯಾಪ್ತಿಯಲ್ಲಿ ಕಂಡ ಕಂಡಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಆಯ್ದ ಕಡೆ ಜಾಗ ಗುರುತಿಸಬೇಕು. ಮಾಂಸದ ಅಂಗಡಿಗಳನ್ನು ಕೂಡ ಪ್ರತ್ಯೇಕ ಸ್ಥಳದಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಕೆ.ಜಿ.ಮನು ಆಗ್ರಹಿಸಿದರು. ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಇದ್ದರು. ಸಭೆಯಲ್ಲಿ ಮಾಜಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.