ಸೋಮವಾರಪೇಟೆ, ಜ. ೩೦: ಸಮೀಪದ ಶಾಂತಳ್ಳಿ ಅಂಗನವಾಡಿ ಶಿಕ್ಷಕಿ ಹಾಗೂ ಬೂತ್ ಮಟ್ಟದ ಅಧಿಕಾರಿಯಾಗಿರುವ ಎಂ.ಎಲ್. ಇಂದ್ರಾವತಿ ಅವರಿಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯದಾದ್ಯಂತ ಚುನಾವಣಾ ತಯಾರಿಯ ಪೂರ್ವಸಿದ್ಧತೆಯ ಭಾಗವಾಗಿ ಮತದಾರರ ಗುರುತಿನ ಚೀಟಿ, ಸಮೀಕ್ಷೆ, ಸೇರ್ಪಡೆ, ತಿದ್ದುಪಡಿ ಸೇರಿದಂತೆ ಚುನಾವಣಾ ಆಯೋಗ ನೀಡಿದ ಜವಾಬ್ದಾರಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಬಿಎಲ್‌ಓಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗಿದ್ದು, ಇದರಲ್ಲಿ ಕೊಡಗು ಜಿಲ್ಲೆಯಿಂದ ಶಾಂತಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿಯಾಗಿರುವ ಬಿಎಲ್‌ಓ ಇಂದ್ರಾವತಿ ಅವರೂ ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಸರ್ ಪುಟ್ಟಣಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಿದ್ದ ೧೬ನೇ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.