ಶನಿವಾರಸಂತೆ, ಜ. ೩೧: ಶನಿವಾರಸಂತೆ ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಸಹಯೋಗದೊಂದಿಗೆ ಫೆ.೨ ರಿಂದ ಆರಂಭವಾಗುವ ೮೨ನೇ ವರ್ಷದ ಐತಿಹಾಸಿಕ ಶ್ರೀ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಜಿಲ್ಲೆ ಮತ್ತು ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.

೧೯೪೫ರಲ್ಲಿ ಚಿತ್ರದುರ್ಗದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಸೋಮವಾರಪೇಟೆ ತಾಲೂಕಿನ ಬೇಳೂರು ಮಠಕ್ಕೆ ಭೇಟಿ ನೀಡಿದ್ದರು. ಇದೇ ಜಾತ್ರಾ ಮೈದಾನದಲ್ಲಿ ಅವರ ನೇತೃತ್ವದಲ್ಲಿ ವೀರಶೈವ ಧರ್ಮ ಸಮ್ಮೇಳನ ನಡೆದಿತ್ತು.ಆ ಸಮ್ಮೇಳನದ ನೆನಪಿಗಾಗಿ ಅಂದಿನಿAದ ಪ್ರತಿ ವರ್ಷ ಇಲ್ಲಿ ಜಾನುವಾರು ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ.ಅಲ್ಲದೇ ಈ ಜಾತ್ರೆ “ಜಯದೇವ ಜಾನುವಾರುಗಳ ಜಾತ್ರೆ’’ ಎಂದೇ ಪ್ರಸಿದ್ಧಿ ಪಡೆದಿದೆ.

೧೯೪೫ ರಲ್ಲಿ ಜಾತ್ರಾ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲು ಸಮಿತಿ ರಚಿಸಿಕೊಂಡು ಉತ್ಸವವನ್ನು ಆರಂಭಿಸಲಾಯಿತು. ವರುಷ ಉರುಳತೊಡಗಿದಂತೆ ಜಾತ್ರೆಗೆ ವಿವಿಧೆಡೆಯಿಂದ ಜಾನುವಾರುಗಳು ಬಂದು ಸೇರತೊಡಗಿದವು. ಜಿಲ್ಲೆಯಿಂದ ಮಾತ್ರವಲ್ಲ; ನೆರೆಯ ಹಾಸನ ಜಿಲ್ಲೆಯ ಅರಕಲಗೂಡು, ಗೊರೂರು, ಕಟ್ಟಾಯ, ಮಲ್ಲಿಪಟ್ಟಣ, ಮಗ್ಗೆ ಹಾಗೂ ಮೈಸೂರು ಜಿಲ್ಲೆಯಲ್ಲೂ ಹಸ್ತಪ್ರತಿ ಹಂಚುವ ಮೂಲಕ ಅಧಿಕ ಪ್ರಮಾಣದಲ್ಲಿ ಜಾನುವಾರುಗಳು ಜಾತ್ರೆಗೆ ಬಂದು ಜಾನುವಾರುಗಳ ವ್ಯಾಪಾರ ನಡೆಯತೊಡಗಿತು. ಅಂಗಡಿ ಮುಂಗಟ್ಟು, ಹೊಟೇಲ್‌ಗಳಿಗೂ ಯಾವುದೇ ಸುಂಕ ವಿಧಿಸದೇ ಸಮಿತಿಯ ಸ್ವಂತ ವೆಚ್ಚದಲ್ಲಿ ೧೫ ದಿನಗಳ ಕಾಲ ಜಾತ್ರಾ ಉತ್ಸವ ನಡೆಯುತ್ತಿತ್ತು.

ಜಾತ್ರೆಯ ಯಶಸ್ಸಿಗೆ ಹಲವಾರು ಮಹನೀಯರು ಶ್ರಮಿಸಿದ್ದು; ಕಿತ್ತೂರಿನ ಕೆ. ಮಲ್ಲಪ್ಪ ಸಚಿವರಾಗಿದ್ದಾಗ ಜಾತ್ರೆ ನಡೆಯುತ್ತಿದ್ದ ಈ ಮೈದಾನವನ್ನು ಜಾತ್ರೆಗಾಗಿಯೇ ಮೀಸಲಿರಿಸಿದರು.ನಂತರ ಶನಿವಾರಸಂತೆಯ ಮಾಜಿ ಪುರಸಭಾಧ್ಯಕ್ಷ ದಿ. ಬಿ. ಗಂಗಪ್ಪ ಕರ್ಕೇರ, ಮಹಾಂತಪ್ಪ, ಶಾಂತವೀರಪ್ಪ, ಚಂದ್ರಶೇಖರ್, ಕಿತ್ತೂರು ವೀರಪ್ಪ, ಹಂಡ್ಲಿ ಪುಟ್ಟಣ್ಣ ಮತ್ತಿತರರು ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸ್ಥಳೀಯ ಮಂಡಲ ಪಂಚಾಯಿತಿ ಮೂಲಕ ಜಾತ್ರೆ ನಡೆಸಿಕೊಂಡು ಬಂದರು.

ಜಾತ್ರೆಯ ಮೊದಲ ದಿನ ಉದ್ಘಾಟನಾ ಸಮಾರಂಭದAದು ಗುಡುಗಳಲೆ ಗ್ರಾಮದ ಶ್ರೀಬಸವೇಶ್ವರ ದೇವಾಲಯದ ನೆರೆ ಬಸವಣ್ಣ ದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮಂಗಳವಾದ್ಯದೊAದಿಗೆ ಜಾತ್ರಾ ಮೈದಾನಕ್ಕೆ ತಂದು ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಸಮೀಪದ ಹಾರಳ್ಳಿ ಗ್ರಾಮದ ರಾಜವಂಶದ ಪ್ರಮುಖ ಕೊಡಗಿನ ಕೊನೆಯ ರಾಜ ಚಿಕ್ಕವೀರ ರಾಜೇಂದ್ರನ ಕುಟುಂಬದವರು ಜಾತ್ರಾ ಮೈದಾನದ ದೀಣೆ ಮೇಲೆ ಶ್ರೀಬಸವೇಶ್ವರ ದೇವರ ೨ ಪುಟ್ಟ ಗುಡಿಗಳನ್ನು ನಿರ್ಮಿಸಿದ್ದಾರೆ.ಈಗಲೂ ಜಾತ್ರಾ ಮೈದಾನದಲ್ಲಿ ಬಸವೇಶ್ವರ ದೇವರ ಒಂದು ಪುಟ್ಟ ಗುಡಿಯಿದೆ.ಮತ್ತೊಂದು ಪುಟ್ಟ ಗುಡಿಯನ್ನು ಜೀರ್ಣೋದ್ಧಾರ ಮಾಡಿ ಭವ್ಯವಾದ ಶ್ರೀಬಸವೇಶ್ವರ ದೇವಾಲಯ ನಿರ್ಮಾಣವಾಗಿದೆ.

ಜಾತ್ರೆಯ ವಸ್ತುಪ್ರದರ್ಶನದಲ್ಲಿ ರೈತರು ಬೆಳೆಯುವ ವಿವಿಧ ತರಕಾರಿ, ಹಣ್ಣುಹಂಪಲು, ಗೃಹ ಕೈಗಾರಿಕೆ, ಗುಡಿ ಕೈಗಾರಿಕೆಯ ವಸ್ತುಗಳು ಪ್ರದರ್ಶನಗೊಳ್ಳುತ್ತವೆ. ಆಟಿಕೆ, ಶೃಂಗಾರ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ಸ್ಟೀಲ್ ಪಾತ್ರೆಗಳ ಮಳಿಗೆಗಳು ಮಕ್ಕಳು-ಮಹಿಳೆಯರನ್ನು ಆಕರ್ಷಿಸುತ್ತವೆೆ. ಪ್ರತಿದಿನ ರಾತ್ರಿ ನಡೆಯುವ ರಸಮಂಜರಿ, ನಗೆನಾಟಕ, ಮನೋರಂಜನಾ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸುತ್ತವೆ. ದುರಂತವೆAದರೆ ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ವರ್ಷದ ಜಾತ್ರೆಯಲ್ಲಿ ಹಳ್ಳಿಕಾರ್ ಜಾನುವಾರುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಬರಲಿವೆ. ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ. ಜಾತ್ರೆಯ ಗತವೈಭವ ಮರುಕಳಿಸದಿದ್ದರೂ ಜನರ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ಜಾನುವಾರುಗಳ ಜಾತ್ರೆ ಜನಗಳ ಜಾತ್ರೆಯಾಗಿ ನಡೆಯುತ್ತಿದೆ. ಜಾತ್ರೆಯ ಯಶಸ್ಸಿಗೆ ಜಾತ್ರಾ ಸಮಿತಿಯೊಂದಿಗೆ ಜನಪ್ರತಿನಿಧಿಗಳ ಹಾಗೂ ಗ್ರಾಮಸ್ಥರ ಸಹಕಾರವೂ ಅತ್ಯಗತ್ಯವಾಗಿದೆ.

ಉದ್ಘಾಟನಾ ಸಮಾರಂಭ

ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆ ಉದ್ಘಾಟನಾ ಸಮಾರಂಭ ಫೆ.೨ ರಂದು ಮಧ್ಯಾಹ್ನ ೧೨ ಗಂಟೆಗೆ ಜಾತ್ರಾ ಮೈದಾನದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ ೧೦ ಗಂಟೆಗೆ ಗುಡುಗಳಲೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ವಾದ್ಯಗೋಷ್ಠಿಯೊಂದಿಗೆ ಶ್ರೀ ಬಸವಣ್ಣ ದೇವರ ಉತ್ಸವ (ಅಡ್ಡೆ) ಮೂರ್ತಿಯನ್ನು ವೀರಗಾಸೆ ಕುಣಿತದೊಂದಿಗೆ ಮೆರವಣಿಗೆ ಮೂಲಕ ಜಾತ್ರಾ ಮೈದಾನಕ್ಕೆ ಕರೆತರಲಾಗುವುದು.

ಮಧ್ಯಾಹ್ನ ೧೨ ಗಂಟೆಗೆ ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವಸ್ವಾಮೀಜಿ, ಕಲ್ಲಳ್ಳಿಮಠದ ರುದ್ರಮುನಿಸ್ವಾಮೀಜಿ, ಮುದ್ದಿನಕಟ್ಟೆಮಠದ ಸಿದ್ಧಲಿಂಗಶಿವಾಚಾರ್ಯಸ್ವಾಮೀಜಿ, ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮನೆಹಳ್ಳಿಮಠದ ಮಹಾಂತಶಿವಲಿAಗ ಸ್ವಾಮೀಜಿ, ಶಿಡಿಗಳಲೆಮಠದ ಇಮ್ಮಡಿ ಶಿವಲಿಂಗಸ್ವಾಮೀಜಿಗಳು ಸಾನಿಧ್ಯ ವಹಿಸುವ ಸಮಾರಂಭವನ್ನು ಶನಿವಾರಸಂತೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಉದ್ಘಾಟಿಸಲಿದ್ದಾರೆ.

ಜಾತ್ರಾ ಸಮಿತಿ ಅಧ್ಯಕ್ಷೆ ಚೈತ್ರಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಕೆ.ವಿ. ಹಾಲಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜ್, ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಕಾರ್ಯದರ್ಶಿ ಎಸ್.ಎಂ. ಉಮಾಶಂಕರ್, ಶ್ರೀಕಾಳಿಕಾಂಬ ದೇವಸ್ಥಾನ ಅಧ್ಯಕ್ಷ ಬಿ.ಬಿ. ನಾಗರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಿದಾನಂದ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಜಾತ್ರಾ ಸಮಿತಿ ಉಪಾಧ್ಯಕ್ಷ ಬಸವಯ್ಯ, ಕಾರ್ಯದರ್ಶಿ ಹೆಚ್.ಎಂ. ವಿನೀತ್ ಕುಮಾರ್, ಸಹಕಾರ್ಯದರ್ಶಿ ಉಷಾ, ಕಾರ್ಯಕಾರಿ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಗ್ರಾಮ ಮುಖಂಡರು, ಅಧಿಕಾರಿಗಳು, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

- ಶ.ಗ. ನಯನತಾರಾ