ಐಗೂರು, ಜ. ೩೦: ಕಾಜೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ. ಕೃಷ್ಣಪ್ಪನವರು ಭಾಗವಹಿಸಿದ್ದರು. ಫೆ. ೯ರಂದು ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಐಗೂರು ವ್ಯಾಪ್ತಿಯ ಒಟ್ಟು ೨೬ ಶಾಲೆಗಳ ಮುಖ್ಯ ಶಿಕ್ಷಕರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಸಾಪ ಐಗೂರು ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಐಗೂರಿನಲ್ಲಿ ನಡೆಯುವ ಕನ್ನಡದ ಹಬ್ಬದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಶಿಕ್ಷಕರು ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಭಾಗವಹಿಸಿ ಸಮ್ಮೇಳನದ ಯಶಸ್ಸಿಗೆ ತನು ಮನದೊಂದಿಗೆ ಕೈಜೋಡಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾದ ಯಶ್ವಂತ್ ಕುಮಾರ್ ಮತ್ತು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಮಾತನಾಡಿ, ಸಮ್ಮೇಳನದ ಪ್ರಾರಂಭದಿAದ ಮೆರವಣಿಗೆ ಸಭಾ ಕಾರ್ಯಕ್ರಮ ಮತ್ತು ಆಹಾರ ಸಮಿತಿಗಳ ಜವಾಬ್ದಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮ ಮುಗಿದ ನಂತರ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಮಕ್ಕಳ ಮನೆಗಳಿಗೆ ತಲುಪಿಸುವುದಾಗಿ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಪ್ಪ ಅವರು ಮಾತನಾಡಿ ನಮ್ಮ ತಾಯಿಭಾಷೆ ಕನ್ನಡ, ಕನ್ನಡದ ತೇರು ಎಳೆಯಲು ಎಲ್ಲಾ ಶಿಕ್ಷಕ ವೃಂದದವರು ತನು ಮನದೊಂದಿಗೆ ವಿದ್ಯಾರ್ಥಿಗಳ ಜೊತೆ ಸೇರಿ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಕಾಜೂರು ಶಾಲಾ ಅಧ್ಯಾಪಕ ವೃಂದದವರಿAದ ಶಿಕ್ಷಣಾಧಿಕಾರಿ ಕೃಷ್ಣಪ್ಪನವರನ್ನು ಶಾಲುಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಶಿಕ್ಷಕಿ ಸರಳ ಕುಮಾರಿ ಸ್ವಾಗತಿಸಿ, ಶಿಕ್ಷಕಿ ಅನಸೂಯ ವಂದಿಸಿ, ಶಿಕ್ಷಕ ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.