ಮಡಿಕೇರಿ, ಜ. ೩೦: ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆ ಪ್ರಯುಕ್ತ ಬಾಬಾಸಾಹೇಬ್ ಅನುಯಾಯಿಗಳೊಂದಿಗೆ ಸ್ವಾಭಿಮಾನಿ ಸಮಾವೇಶ ಫೆ.೨೨ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ಅಶೋಕ್ಪುರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗುವುದು. ನಂತರ ನಡೆಯುವ ಮೆರವಣಿಗೆಯಲ್ಲಿ ೧೦೦ ಬೈಕ್ಗಳು, ೨೦ ಕಳಸ ಹೊತ್ತ ಮಹಿಳೆಯರು, ಪೂರ್ವಿಕರ ಸ್ತಬ್ಧಚಿತ್ರ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕೊನೆಯಲ್ಲಿ ಬುದ್ಧ, ಅಂಬೇಡ್ಕರ್ ಅವರ ರಥವಿರಲಿದೆ. ಮಧ್ಯಾಹ್ನ ೨ ಗಂಟೆಗೆ ಗಾಂಧಿ ಮೈದಾನದಲ್ಲಿ ಸ್ವಾಭಿಮಾನಿ ಸಮಾವೇಶದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ೫೦೦೦ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು. ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ದಲಿತ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಹಾಗೂ ಜಿಲ್ಲೆಯ ಶಾಸಕದ್ವಯರಿಗೆ ಅಭಿವೃದ್ಧಿ ಕಾರ್ಯಕ್ರಮದ ಆಧಾರದಲ್ಲಿ ಕೊಡಗು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಹೋರಾಟಗಾರರಾದ ಜಯಪ್ಪ ಹಾನಗಲ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ನೌಕರರ ಸಮಿತಿಯ ಅಧ್ಯಕ್ಷ ಸಿದ್ದಯ್ಯ, ಸಮಾಜ ಸೇವಕ ಡಾ.ಎಚ್.ವಿ.ದೇವದಾಸ್ ಅವರಿಗೆ ಕೊಡಗು ಭೂಷಣ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ. ಶಾಲೆಗಳಿಗೆ ಪುಸ್ತಕ ವಿತರಣೆ, ಸ್ವಚ್ಛತಾ ಸಿಬ್ಬಂದಿಗೆ ಸ್ವೆಟರ್ ವಿತರಣೆ, ಆಹಾರ ಕಿಟ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಸಮಿತಿ ಸದಸ್ಯ ವೀರಭದ್ರಯ್ಯ ಮಾತನಾಡಿ, ಜಿಲ್ಲೆಯಲ್ಲಿ ವಾಸ ಮಾಡಲು ಸೂರಿಲ್ಲದೇ ಸಾಕಷ್ಟು ದಲಿತ ಕುಟುಂಬಗಳಿವೆ. ಅವರಿಗೆ ಸರ್ಕಾರದ ವತಿಯಿಂದ ವಸತಿ ಅಥವಾ ನಿವೇಶನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಮಹಿಳಾ ಜಿಲ್ಲಾ ಸಂಚಾಲಕಿ ಪ್ರೇಮ ಕೃಷ್ಣಪ್ಪ, ಜಿಲ್ಲಾ ಸಂಚಾಲಕ ಟಿ.ಜೆ.ಈರಪ್ಪ, ಪೊನ್ನಂಪೇಟೆ ತಾಲೂಕು ಸಂಚಾಲಕ ಜಗದೀಶ್, ಮಡಿಕೇರಿ ನಗರದ ಸಂಚಾಲಕ ಎಂ.ಕೆ.ವೇಣು ಕಿಶೋರ್ ಇದ್ದರು.