ವೀರಾಜಪೇಟೆ, ಜ. ೩೦: ಗ್ರಾಮೀಣ ಭಾಗದಲ್ಲಿರುವ ಹೆಗ್ಗಳ ಸರಕಾರಿ ಹಿರಿಯ ಪ್ರಥಾಮಿಕ ಶಾಲೆ ಶತಮಾನೋತ್ಸವ ಅಂಚಿನಲ್ಲಿದ್ದು ಇಲ್ಲಿನ ವಿದ್ಯಾರ್ಥಿಗಳು ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಖಾಸಗಿ ಶಾಲೆಗಿಂತ ಏನೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ಬೋಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ತಾನು ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ಹಿಂದಿನ ದಿನದಲ್ಲಿ ಶಾಲೆಗೆ ಬರಲು ಯಾವುದೇ ಸೌಲಭ್ಯಗಳಿರಲಿಲ್ಲ. ಶಾಲಾ ಬ್ಯಾಗ್ ಹೊತ್ತು ೫ ಕಿ.ಮೀ. ನಡೆದು ಬಂದು ಕಲಿಯಬೇಕಾಗಿತ್ತು
ಆದರೆ ಇಂದು ಶಿಕ್ಷಣಕ್ಕಾಗಿ ಎಲ್ಲಾ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ಶಿಸ್ತು ಮತ್ತು ಛಲದಿಂದ ಗುರಿ ಮುಟ್ಟುವಂತಾಗಬೇಕು ಎಂದರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸುವಂತಾಗಬೇಕು. ಕ್ರೀಡೆ, ಆರೋಗ್ಯ ಮತ್ತು ಉಲ್ಲಾಸವನ್ನು ನೀಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಯ ಕಾಯಿಯಂತಿರುವ ವಿದ್ಯಾರ್ಥಿಗಳು ಗ್ರಾಮ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿಯು ಭಾಗವಹಿಸಿ ಪೋಷಕರಿಗೆ ಮತ್ತು ಶಾಲೆಗೂ ಕೀರ್ತಿ ತರುವಂತಾಗಬೇಕು ಎಂದರು.
ಕಾಫಿ ಬೆಳೆಗಾರರು, ಮಾಜಿ ಯೋಧರುಗಳಾದ ಕ್ಯಾಪ್ಟನ್ ಬಿ.ಎ. ಭವಾನಿ ಶಂಕರ್ ಮತ್ತು ರಾಮಮೂರ್ತಿ ಅವರುಗಳು ಮಾತನಾಡಿ, ನಾವುಗಳು ಇದೇ ಶಾಲೆಯಲ್ಲಿ ವಿದ್ಯೆ ಕಲಿತು ಉತ್ತಮ ಹುದ್ದೆಗಳಲ್ಲಿದ್ದು ಈಗ ನಿವೃತ್ತಿಗೊಂಡಿದ್ದೇವೆ. ವಿದ್ಯೆ ನೀಡಿದ ಗುರುಗಳಿಗೂ ಮತ್ತು ಹಿರಿಯರಿಗೂ ಗೌರವ ನೀಡುವ ಮೂಲಕ ದೇಶದ ಉತ್ತಮ ಪ್ರಜೆಗಳಾಗುವಂತೆ ಕಿವಿಮಾತು ಹೇಳಿದರು.
ಶಾಲಾ ವಾರ್ಷಿಕೋತ್ಸವ ಸಮಾರಂಭದ ಅದ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್. ರಾಜೇಶ್ ವಹಿಸಿದ್ದರು. ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿ ವ್ಯವಸ್ಥಾಪಕರಾದ ಪೂಜ ರವೀಂದ್ರ, ಎಸ್.ಡಿ.ಎಂ.ಸಿ ನಾಮ ನಿರ್ದೇಶಕ ಸದಸ್ಯ ಸುಧೀಶ್, ಕೃಷಿಕರಾದ ಸೋಮಶೇಖರ್, ಶಾಲಾ ಮುಖ್ಯ ಶಿಕ್ಷಕರಾದ ಸುನಿತ ಅವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಾಯಿಲಮಕ್ಕಿ ಗಣಪತಿ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಅಪ್ಪಚ್ಚು, ಹಳೆ ವಿದ್ಯಾರ್ಥಿ ಚರಿಷ್ಮ, ಸಿಂಚನ, ಸದಾನಂದ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕರಾದ ಕೆ. ಸುಜಾತ, ಕೆ.ವಿ.ಹೇಮಲತ, ಐರೀನ ಡಿಸೋಜ, ಲೂಸಿ ಸಿಂತಿಯಾ ಗೋನ್ಸಾಲ್ವೆಸ್ ಇದ್ದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ಕ್ರೀಡೆ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಜೇತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.