ಚೆಯ್ಯಂಡಾಣೆ, ಜ. ೩೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆಗಳನ್ನು ತುಳಿದು ನಾಶಪಡಿಸಿದೆ. ಚೇಲಾವರ ಗ್ರಾಮದ ಕುಟ್ಟನ ರಾಧಾಕೃಷ್ಣ (ರವಿ) ಹಾಗೂ ಮತ್ತಿತರ ಬೆಳಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಳಿ ನಡೆಸಿದ ಕಾಡಾನೆಗಳು ಬೈನೆ ಮರವನ್ನು ಬೀಳಿಸಿ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ಹಾಗೂ ತೋಟಕ್ಕೆ ಹಾಕಲು ಸಂಗ್ರಹಿಸಿಟ್ಟಿದ್ದ ಸುಣ್ಣದ ಚೀಲವನ್ನು ತುಳಿದು ಅಪಾರ ಪ್ರಮಾಣದಲ್ಲಿ ಹಾನಿಪಡಿಸಿ ನಷ್ಟ ಉಂಟು ಮಾಡಿದೆ. ಗ್ರಾಮದ ಬೆಳೆಗಾರ ರಾಧಾಕೃಷ್ಣ ಶಕ್ತಿಯೊಂದಿಗೆ ಮಾಹಿತಿ ನೀಡಿ ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಜನರು ಭಯ ಭೀತರಾಗಿದ್ದಾರೆ. ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ, ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದ ಅವರು ಕೂಡಲೆ ಕಾಡಾನೆಗಳು ತೋಟಗಳಿಗೆ ನುಸುಳದ ರೀತಿಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗ್ರಾಮದಲ್ಲಿ ನಿರಂತರ ಕಾಡಾನೆ ಗಳು ದಾಳಿ ನಡೆಸು ತ್ತಿದ್ದು ಇದರಿಂದ ಗ್ರಾಮಸ್ಥರು ನಡೆದಾಡಲು ಆತಂಕ ಪಡುವ ಪರಿಸ್ಥಿತಿ ಉದ್ಭವವಾಗಿದೆ. ಸಂಬAಧಪಟ್ಟ ಅರಣ್ಯ ಇಲಾಖೆ ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮಕೈಗೊಂಡು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಹಾಗೂ ನಷ್ಟ ಹೊಂದಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.