ಮಡಿಕೇರಿ, ಜ. ೩೧: ಮಂಜಿನ ನಗರಿ ಮಡಿಕೇರಿ ದಿನೇ ದಿನೇ ಬೆಳೆಯುತ್ತಿದೆ., ಪ್ರವಾಸಿ ತಾಣವೂ ಆಗಿರುವ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಿಂದೆ ಮಡಿಕೇರಿ ನಗರಕ್ಕೆ ಪ್ರವೇಶಿಸುತ್ತಿದ್ದಂತೆ ಸುದರ್ಶನ ವೃತ್ತದ ಬಳಿ ಹಾಗೂ ಅತ್ತ ಕನ್ನಂಡ ಬಾಣೆ ಬಳಿಯಿಂದ ನೋಡಿದರೆ ಸುಂದರವಾದ ಬೆಟ್ಟ ಗುಡ್ಡಗಳ ಸಾಲುಗಳು ಸ್ವಾಗತ ಕೋರುತ್ತಿದ್ದವು.., ಆದರೀಗ ಎಲ್ಲಿಂದ ನೋಡಿದರೂ ರಾಶಿ ಬಿದ್ದಿರುವ ಕಸದ ಗುಡ್ಡ ಕಣ್ಣಿಗೆ ರಾಚುತ್ತದೆ..! ನಗರದಲ್ಲಿ ಸಂಗ್ರಹವಾಗುವ ಕಸಗಳನ್ನು ಸಂಗ್ರಹ ಮಾಡಲು ಜಾಗವಿಲ್ಲದೆ ಈಗ ಇರುವ ಜಾಗದಲ್ಲಿ ಕಸದ ರಾಶಿ ತುಂಬಿ ಹೋಗಿದ್ದು ಎಲ್ಲೆಂದರಲ್ಲಿ ಕಸಗಳು ಹಾರಾಡುತ್ತಿವೆ., ಸಂಗ್ರಹವಾಗಿರುವ ಕಸವನ್ನು ಸಾಗಾಟ ಮಾಡಲು ಟೆಂಡರ್ ಆಗಿದ್ದರೂ ಸಾಗಿಸಲು ಗುತ್ತಿಗೆದಾರ ಆಸಕ್ತಿ ತೋರದಿರುವದು ಕಸದ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ..!

ಸುಮಾರು ೨೦ವರ್ಷಗಳ ಹಿಂದೆ ಅಂದಿನ ಜನಸಂಖ್ಯೆಗನುಸಾರ ನಗರದ ಸ್ಟೋನ್ ಹಿಲ್ ಬಳಿಯ ಗುಡ್ಡದ ಮೇಲೆ ಒಂದೂವರೆ ಎಕರೆ ಜಾಗವನ್ನು ಕಸ ಹಾಕಲು ಗುರುತಿಸಲಾಗಿ ಅಲ್ಲಿಯೇ ಕಸ ಸುರಿಯಲಾಗುತ್ತಿತ್ತು. ಬರ ಬರುತ್ತಾ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿ ಕಸ ಕೊಳೆಯದೇ ಕಸದ ರಾಶಿ ಹೆಚ್ಚಾಗತೊಡಗಿತು. ಆ ಸಮಯದಲ್ಲಿ ಕಸ ವಿಂಗಡಣಾ ಯಂತ್ರವನ್ನು ಅಳವಡಿಸಿ ಹಸಿ ಕಸ, ಒಣ ಕಸವನ್ನು ವಿಂಗಡಣೆ ಮಾಡುವ ಕಾರ್ಯ ಆರಂಭಿಸಲಾಯಿತು. ನಂತರ ಯಂತ್ರ ಕೈಕೊಟ್ಟ ಬಳಿಕ ಮತ್ತೆ ಕಸದ ರಾಶಿ ಬೆಳೆದು ಕಸಗಳು ಕೆಳಭಾಗದ ಸುಬ್ರಮಣ್ಯ ನಗರಕ್ಕೆ ಜಾರತೊಡಗಿತು, ಇದರೊಂದಿಗೆ ನೊಣಗಳ ರಾಶಿ ಮನೆಗಳಿಗೆ ಮುತ್ತಿಗೆ ಹಾಕಲಾರಂಭಿಸಿದವು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ನಾಲ್ಕು ವಾರ್ಡ್ಗಳ ಪ್ರಮುಖರು ಸಂಘವೊAದನ್ನು ರಚಿಸಿ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ನ್ಯಾಯಾಲಯವು ಕಸ ತೆರವುಗೊಳಿಸುವದರೊಂದಿಗೆ ಕಸ ಹಾಕಲು ಪರ್ಯಾಯ ಜಾಗ ಒದಗಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು. ಅದರಂತೆ ಕಂದಾಯ ಇಲಾಖೆ ಮೂಲಕ ೧೦ ಎಕರೆ ಜಾಗ ಗುರುತಿಸಲಾಯಿತಾದರೂ ಅದಕ್ಕೂ ತಕರಾರು ಎದುರಾಗಿದೆ. ಇತ್ತ ಕಸ ಸಾಗಾಟ ಮಾಡಲು ಟೆಂಡರ್ ಆಗಿದ್ದರೂ ಗುತ್ತಿಗೆದಾರ ಕಸ ಸಾಗಾಟ ಮಾಡದ ಹಿನ್ನೆಲೆಯಲ್ಲಿ ಕಸದ ಗುಡ್ಡ ಬೆಳೆಯುತ್ತಲೇ ಇದೆ..!

ದಶಕಗಳ ಸಮಸ್ಯೆ..!

ಮಡಿಕೇರಿ ಕಸದ ಸಮಸ್ಯೆ ಇಂದು ನಿನ್ನೆಯದಲ್ಲ., ಸರಿ ಸುಮಾರು ೨೦ ವರ್ಷಗಳ ಹಿಂದಿನದ್ದು. ಈ ಹಿಂದೆ ಚೈನ್‌ಗೇಟ್ ಬಳಿ ಕಸ ಸುರಿಯಲಾಗುತ್ತಿತ್ತು. ಆದರೆ ಅಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಟೋನ್ ಹಿಲ್ ಬಳಿ ಜಾಗ ಗುರುತಿಸಿ ಅಲ್ಲಿ ಕಸ ಸುರಿಯಲು ಆರಂಭಿಸಲಾಯಿತು. ವರ್ಷಗಳುರುಳಿದಂತೆ ಕಸದ ರಾಶಿ ಬೆಳೆಯುತ್ತಿದ್ದಂತೆ ಸಮಸ್ಯೆ ಎದುರಾಯಿತು. ಈ ಸಂದರ್ಭದಲ್ಲಿ ಕಸ ವಿಂಗಡಣೆ ಯಂತ್ರವನ್ನು ಅಳವಡಿಸಿ ಹಸಿ ಕಸ ಒಣ ಕಸ ಬೇರ್ಪಡಿಸಿ ಹಸಿ ಕಸದಿಂದ ಗೊಬ್ಬರ ತಯಾರಿಸುವ ಕಾರ್ಯ ಆರಂಭಿಸಲಾಯಿತು. ಬರ ಬರುತ್ತಾ ಯಂತ್ರ ಕೆಟ್ಟು ಹೋಗಿ ಮತ್ತೆ ಕಸದ ರಾಶಿ ಬೆಳೆಯತೊಡಗಿ ಮಳೆಗಾಲದಲ್ಲಿ ಕಸ ಕೊಳೆತು ಹರಿಯುವ ಮಲಿನ ತ್ಯಾಜ್ಯ ನೀರು ಬೆಟ್ಟದ ಕೆಳಗಿನ ಸುಬ್ರಮಣ್ಯ ನಗರದತ್ತ ಹರಿಯತೊಡಗಿದಾಗ ಜನರು ಆಕ್ರೋಶ ವ್ಯಕ್ತಪಡಿಸತೊಡಗಿದರು. ಬೇಸಿಗೆಯಲ್ಲಿ ಕಸದ ರಾಶಿಯಲ್ಲಿ ನೊಣಗಳು ಉತ್ಪತ್ತಿಯಾಗಿ ಸುಬ್ರಮಣ್ಯ ನಗರ, ರೈಫಲ್ ರೇಂಜ್, ವಿದ್ಯಾನಗರ ಸೇರಿದಂತೆ ಕಾನ್ವೆಂಟ್ ಜಂಕ್ಷನ್‌ನಲ್ಲಿರುವ ವಿಜಯ ವಿನಾಯಕ ದೇವಾಯಲದವರೆಗೂ ನೊಣಗಳು ಹಾರಾಡಲಾರಂಭಿಸಿದವು. ಊಟ ಮಾಡಲು ತಟ್ಟೆಗೆ ಅನ್ನ ಬಡಿಸಿಕೊಂಡರೆ ಸಾಕು ನೊಣಗಳು ಮುತ್ತಿಗೆ ಹಾಕುತ್ತಿದ್ದವು.

ಇದರಿಂದ ಬೇಸತ್ತ ನಾಗರಿಕರು ಎಸ್‌ಆರ್‌ವಿಕೆ ಎಂಬ ಸಂಘ ರಚನೆ ಮಾಡಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅರ್ಜಿ ಸಲ್ಲಿಸಿದರು. ಆದರೆ ಇಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಸುದೀರ್ಘ ಹೋರಾಟ..!

ಕಸದ ಸಮಸ್ಯೆ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆಯಿತು. ಎಸ್‌ಅರ್‌ವಿಕೆ ಸಂಘದವರು ದಾಖಲೆ ಸಹಿತ ನ್ಯಾಯಾಲಯಕ್ಕೆ ವಿವರವಾದ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಸ್ಥಳದಲ್ಲಿ ರಾಶಿ ಬಿದ್ದಿರುವ ಕಸವನ್ನು ಬೇರೆಡೆಗೆ ಸ್ಥಳಾಂತರಿಸುವದರೊAದಿಗೆ ಕಸ ಹಾಕಲು ಪರ್ಯಾಯ ಜಾಗ ಒದಗಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿತು.

೧೦ ಎಕರೆ ಜಾಗ..!

ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಕಂದಾಯ ಇಲಾಖೆ ಜಾಗ ಹುಡುಕಾಟ ಆರಂಭಿಸಿತ್ತು. ಈ ಸಂದರ್ಭದಲ್ಲಿ ಸಂಘದವರೇ ಎರಡನೇ ಮೊಣ್ಣಂಗೇರಿಯಲ್ಲಿ ಖಾಲಿ ಜಾಗವನ್ನು ಗುರುತಿಸಿ ದಾಖಲೆ ಸಹಿತ ಕಂದಾಯ ಇಲಾಖೆಗೆ ನೀಡಿದ್ದರು. ಆಗಿನ ಶಾಶಕರುಗಳು ಕೂಡ ಜಾಗ ಪರಿಶೀಲಿಸಿ, ಒಪ್ಪಿಗೆ ಸೂಚಿಸಿದ್ದರು. ಕಂದಾಯ ಇಲಾಖೆ ೧೦ ಎಕರೆ ಜಾಗವನ್ನು ನಗರಸಭೆ ಹೆಸರಿಗೆ ಮಂಜೂರು ಮಾಡಿ ಆರ್‌ಟಿಸಿ ಸಹಿತ ಹಸ್ತಾಂತರ ಮಾಡಿತ್ತು.

ಬೇಲಿ ಅಳವಡಿಕೆ..!

ಕಂದಾಯ ಇಲಾಖೆ ನೀಡಿದ ಜಾಗಕ್ಕೆ ನಗರಸಭೆ ವತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೇಲಿ ಸುತ್ತಲೂ ಬೇಲಿ ನಿರ್ಮಿಸಿ, ರಸ್ತೆ ಕೂಡ ನಿರ್ಮಾಣ ಮಾಡಿದೆ. ನೂತನ ಜಾಗದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ, ಕಸ ವಿಂಗಡಣೆ ಹಾಗೂ ಮರುಪೂರಣ ಮಾಡುವ ಯೋಜನೆಯನ್ನೂ ರೂಪಿಸಲಾಗಿತ್ತು.

ಅರಣ್ಯ ಇಲಾಖೆ ಅಡ್ಡಿ..!

ಇಷ್ಟೆಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಕಸದ ಸಮಸ್ಯೆಗೆ ಮುಕ್ತಿ ದೊರಕಿತು ಎನ್ನುವಾಗಲೇ ಮತ್ತೊಂದು ಕಂಟಕ ಎದುರಾಯಿತು. ಕಂದಾಯ ಇಲಾಖೆ ಪೈಸಾರಿ ಜಾಗವೆಂದು ಮಂಜೂರು ಮಾಡಿ ಕೊಟ್ಟರೂ ಅರಣ್ಯ ಇಲಾಖೆ ತಕರಾರು ಆರಂಭವಾಯಿತು. ರಸ್ತೆ ಹಾಗೂ ಗುರುತಿಸಲಾಗಿರುವ ಜಾಗ ಅರಣ್ಯ ಪ್ರದೇಶದ ಒತ್ತಿನಲ್ಲಿದೆಯೆಂದು ಆಕ್ಷೇಪ ವ್ಯಕ್ತಪಡಿಸಿ ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಿಸಿತು. ಹಾಗಾಗಿ ಮತ್ತೆ ಕಸದ ಸಮಸ್ಯೆ ಬಿಗಡಾಯಿಸುತ್ತಿದೆ..!

ಐದು ಬಾರಿ ಟೆಂಡರ್..!

ಇತ್ತ ಕಸ ಹಾಕಲು ಹೊಸ ಜಾಗ ದೊರಕದೇ ಇರುವದರಿಂದ ಸ್ಟೋನ್ ಹಿಲ್‌ನಲ್ಲಿ ಕಸದ ರಾಶಿ ಬೆಳೆಯತೊಡಗಿತು. ಕಸ ಹಾಕಲು ಜಾಗವಿಲ್ಲದಾದಾಗ ಅಲ್ಲಿಂದ ಹಳೆ ಕಸ ಸಾಗಾಟ ಮಾಡಲು ಶಾಸಕ ಮಂತರ್ ಗೌಡ ಅವರ ಸೂಚನೆಯಂತೆ ನಗರ ಸಭೆಯಿಂದ ಟೆಂಡರ್ ಕರೆಯಲಾಯಿತು. ಆದರೆ, ಐದು ಬಾರಿ ಟೆಂಡರ್ ಕರೆದರೂ ಯಾರೂ ಕೂಡ ಭಾಗವಹಿಸಲಿಲ್ಲ. ಐದನೇ ಬಾರಿಗೆ ಕರೆದ ಟೆಂಡರ್‌ನಲ್ಲಿ ಭಾಗವಹಿಸಿದ ಪೂನಾ ಮೂಲದ ಗುತ್ತಿಗೆದಾರನಿಗೆ ರೂ. ೫.೮ಕೋಟಿಗೆ ಟೆಂಡರ್ ನೀಡಲಾಗಿದ್ದು, ಹಣ ಮೀಸಲಿರಿಸಲಾಗಿದೆ.

ಮಳೆಯ ಕಾರಣವೊಡ್ಡಿ ವಿಳಂಬ..!

ಟೆAಡರ್ ಸಿಕ್ಕಿದ ಬಳಿಕ ಗುತ್ತಿಗೆದಾರರು ಬೃಹತ್ ಗಾತ್ರದ ಯಂತ್ರಗಳು, ಕಸ ಸಾಗಿಸಲು ದೊಡ್ಡ ದೊಡ್ಡ ಲಾರಿಗಳನ್ನು ತಂದು ಕಸ ಸಂಗ್ರಹಣಾ ಸ್ಥಳದಲ್ಲಿ ನಿಲ್ಲಿಸಿದ್ದರು. ಕೆಲಸವೂ ಆರಂಭವಾಗಿತ್ತು. ಇನ್ನೇನು ಕಸದ ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲಿ ವರುಣರಾಯ ಅಡ್ಡ ಬಂದ. ಆ ಸಮಯದಲ್ಲಿ ಮಳೆ ಸುರಿಯಲಾರಂಭಿಸಿದ್ದರಿAದ ಒಂದಷ್ಟು ಕಾಲ ಕಾದು ನಂತರ ಇಲ್ಲಿ ತಂದು ನಿಲ್ಲಿಸಲಾಗಿದ್ದ ಯಂತ್ರ ಹಾಗೂ ಲಾರಿಗಳನ್ನು ವಾಪಸ್ ಕೊಂಡೊಯ್ದರು. ನಂತರ ಬೇಸಿಗೆ ಬಂದಿತಾದರೂ ಕಸ ಸಾಗಿಸುವಲ್ಲಿ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಸಮಸ್ಯೆ ಎದುರಾಗಿದೆ.

ಕಸ ಮತ್ತೆ ಜಾರುತ್ತಿದೆ..!

ಇತ್ತ ಗುಡ್ಡದ ಮೇಲೆ ಕಸದ ರಾಶಿ ಬೆಳೆಯುತ್ತಿದ್ದಂತೆ ಕಸ ಹಾಕಲು ಜಾಗವಿಲ್ಲದೆ ರಾಶಿಯ ಮೇಲೆಯೇ ಕಸ ಸುರಿಯಲಾಗುತ್ತಿದೆ. ಇದು ತುಂಬಿ ಮತ್ತೆ ಸುಬ್ಯಮಣ್ಯ ನಗರದತ್ತ ಜಾರುತ್ತಿದೆ. ಇತ್ತ ಇನ್ನೊಂದು ಭಾಗದಲ್ಲಿ ಎರಡನೇ ಮೊಣ್ಣಂಗೇರಿ ಭಾಗದ ಜನತೆಯ ಕುಡಿಯುವ ನೀರಿಗೂ ತೊಂದರೆಯಾಗುವ ಸಾಧ್ಯತೆ ಕಂಡುಬರುತ್ತಿದೆ.

ಮುಕ್ತಿಯೇ ಇಲ್ಲ..!

ಒಟ್ಟಿನಲ್ಲಿ ಮಡಿಕೇರಿಯ ಕಸದ ಸಮಸ್ಯೆ ಬಗೆಹರಿಯುವ ಯಾವದೇ ಸೂಚನೆ ಕಂಡುಬರುತ್ತಿಲ್ಲ. ಈಗಾಗಲೇ ಹವಾಮಾನ ಇಲಾಖೆಯ ಸೂಚನೆ ಪ್ರಕಾರ ಮಳೆಯಾಗುವ ಸಾಧ್ಯತೆಯೂ ಇದೆ. ಮಡಿಕೇರಿಯಲ್ಲಿ ಮಳೆ ಆರಂಭವಾಯಿತೆAದರೆ ಮತ್ತೆ ಮಳೆಗಾಲ ಆರಂಭವಾದAತೆಯೇ., ಈಗಾಗಲೇ ಒಂದೆರಡು ಹನಿ ಮಳೆ ಬೀಳುವದರೊಂದಿಗೆ ಮೋಡದ ವಾತಾವರಣ ಇದೆ. ಮಳೆ ಸುರಿದರೆ ಮತ್ತೆ ಸಾಗಾಟ ಕಷ್ಟವಾಗಲಿದೆ. ಮಳೆ ಆರಂಭಕ್ಕಿAತ ಸಾಗಾಟವಾದಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಗಬಹುದೇನೋ..!?

- ಕುಡೆಕಲ್ ಸಂತೋಷ್