ತನ್ನ ಸಾರ್ವಭೌಮತೆಗೆ ಧಕ್ಕೆ ಬರುವುದನ್ನು ತಡೆಯಲು ಎಲ್ಲಾ ದೇಶಗಳೂ ಭೂ ಸೇನೆ, ಜಲ ಸೇನೆ ಹಾಗೂ ವಾಯು ಸೇನೆಯನ್ನು ಬಳಸಿಕೊಳ್ಳುತ್ತದೆ. ಆದರೆ ಶತ್ರುಗಳು ಜಲಮಾರ್ಗದ ಮೂಲಕ ಕಳ್ಳಸಾಗಣೆ ಮಾಡಿ ದೇಶದ ಆರ್ಥಿಕತೆಗೆ ಹೊಡೆತವನ್ನು ನೀಡುತ್ತವೆ. ಇಂತಹ ಕಳ್ಳಸಾಗಣೆಯನ್ನು ತಡೆಯಲು ಭಾರತವು ಕರಾವಳಿ ರಕ್ಷಕ ಪಡೆಯನ್ನು ಬಳಸಿಕೊಂಡು ಭಾರತದ ಕರಾವಳಿಯ ಮೇಲೆ ಹದ್ದಿನ ಕಣ್ಣಿರಿಸಿ ಕಾಯುವುದನ್ನು ಸ್ಮರಿಸಿ ಆ ಪಡೆಯನ್ನು ಗೌರವಿಸಲು ಭಾರತದಲ್ಲಿ ಪ್ರತಿವರ್ಷ ಫೆಬ್ರವರಿ ಮೊದಲನೇ ದಿವಸವನ್ನು ಕರಾವಳಿ ರಕ್ಷಕರ ದಿವಸವೆಂದು ಆಚರಿಸಲಾಗುತ್ತಿದೆ.

೧೯೭೭ರ ಫೆಬ್ರವರಿ ಒಂದರAದು ಜನಿಸಿದ ಈ ಪಡೆಯು ಇದೀಗ ತನ್ನ ಸ್ವರ್ಣ ಸಂಭ್ರಮವನ್ನು ೨೦೨೬ ರಂದು ಆಚರಿಸಿಕೊಳ್ಳುತ್ತಿದೆ. ಭಾರತದ ನಾಗರಿಕರಿಗೆ ಈ ಕರಾವಳಿ ರಕ್ಷಕ ಪಡೆಯ ಉದ್ದೇಶ ಮತ್ತು ಅವರ ಕಾರ್ಯಕೌಶಲದ ಬಗ್ಗೆ ಅರಿವು ಮೂಡಿಸುವುದು ಈ ದಿವಸದ ಉದ್ದೇಶವಾಗಿದೆ.

ಭಾರತ ಒಟ್ಟು ಒಂಭತ್ತು ರಾಜ್ಯಗಳು ಮತ್ತು ಅಂಡಮಾನ್ ದ್ವೀಪ ಸಮೂಹಗಳು, ಡೆಮನ್ ಡಿಯು ಹಾಗೂ ಪುದುಚೇರಿಯೂ ಸೇರಿದಂತೆ ಒಟ್ಟು ೭೫೧೬.೬ ಕಿಲೋಮೀಟರ್‌ನಷ್ಟು ಕರಾವಳಿಯನ್ನು ಹೊಂದಿದ್ದು, ಇದರಲ್ಲಿ ಗುಜರಾತ್ ರಾಜ್ಯ ಅತಿಹೆಚ್ಚು ಉದ್ದದ ಎಂದರೆ ೧೬೦೦ ಕಿಲೋಮೀಟರ್ ಉದ್ದದ ಕರಾವಳಿಯನ್ನು ಹೊಂದಿದೆ. ಈ ದೀರ್ಘವಾದ ಕರಾವಳಿಯನ್ನು ಹಗಲು-ರಾತ್ರಿಯೆನ್ನದೆ ಕಾಯುವುದು ಸುಲಭದ ವಿಷಯವಲ್ಲ. ಇದರೊಂದಿಗೆ ಆಕಸ್ಮಿಕಗಳಿಗೆ ಸಿಲುಕುವ ಮೀನುಗಾರರ ದೋಣಿಗಳನ್ನು ರಕ್ಷಿಸುವುದು, ಇಂತಹ ದೋಣಿಗಳನ್ನು ಮತ್ತು ಆಗಂತುಕರ ಹಡಗುಗಳನ್ನು ತಪಾಸಣೆ ಮಾಡುವುದು, ಕರಾವಳಿಯ ಮೂಲಕ ನಡೆಯಬಹುದಾದ ಕಳ್ಳಸಾಗಣೆಯನ್ನು ತಡೆಗಟ್ಟುವುದು ಮತ್ತು ಕರಾವಳಿಯಲ್ಲಿ ಆಗುವ ಎಲ್ಲಾ ಘಟನೆಗಳನ್ನು ಅವಲೋಕಿಸುವುದು ಈ ಕರಾವಳಿ ರಕ್ಷಕರ ಕರ್ತವ್ಯವಾಗಿದೆ. ಭಾರತದ ಜಲಪಡೆ, ಕಂದಾಯದ ವಿಭಾಗ, ಮೀನುಗಾರಿಕೆ ಇಲಾಖೆ, ಕೇಂದ್ರೀಯ ಸಶಸ್ತç ಆರಕ್ಷಕ ದಳ ಮತ್ತು ರಾಜ್ಯ ಆರಕ್ಷಕ ದಳದವರ ಸಹಯೋಗದಲ್ಲಿ ಕರಾವಳಿ ರಕ್ಷಣಾಪಡೆ ತನ್ನ ಕಾರ್ಯ ನಿರ್ವಹಿಸುತ್ತದೆ. ಈ ಪಡೆಯು ಭಾರತದ ರಕ್ಷಣಾಪಡೆಯ ಮಂತ್ರಾಲಯದ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತದೆ.

“ರಕ್ಷಿಸಲು ಹೋರಾಡುತ್ತೇವೆ, ನಿಮ್ಮೊಂದಿಗೆ ನಾವಿದ್ದೇವೆ” ಎನ್ನುವ ಧ್ಯೇಯಮಂತ್ರವನ್ನು ಹೊಂದಿರುವ ಭಾರತದ ಕರಾವಳಿ ರಕ್ಷಣಾಪಡೆಯು ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳ ಅನಂತರ ೧೯೭೮ರ ಆಗಸ್ಟ್ ೧೮ ರಂದು ಭಾರತದ ಸಂಸತ್ತು ಕರಾವಳಿ ರಕ್ಷಣಾಪಡೆಯ ಅಸ್ತಿತ್ವದ ಬಗ್ಗೆ ಕಾನೂನಿನ ಮೂಲಕ ಸಮ್ಮತಿ ನೀಡಿತು. ಕರಾವಳಿಯ ಮೂಲಕ ಕಳ್ಳಸಾಗಣೆಯಿಂದ ಭಾರತದ ಆಂತರಿಕ ಹಣಕಾಸಿನ ಮೇಲೆ ಆಗುವ ದುಷ್ಪರಿಣಾಮವನ್ನು ತಡೆಗಟ್ಟಲು ಕರಾವಳಿ ರಕ್ಷಣಾಪಡೆಯ ಅಗತ್ಯವನ್ನು ದೇಶ ಮನಗಂಡಿತು. ಹೀಗೆ ಕಳ್ಳಸಾಗಣೆ ತಡೆಗಟ್ಟುವ ಉದ್ದೇಶದಿಂದ ಬಂದ ಈ ಪಡೆಯು ಈವರೆಗೂ ಹತ್ತು ಸಾವಿರಕ್ಕೂ ಹೆಚ್ಚಿನ ಮೀನುಗಾರರನ್ನು ಮತ್ತು ಕರಾವಳಿಯಲ್ಲಿ ಸಂಚರಿಸುವ ಹಡಗುಗಳ ಪ್ರಯಾಣಿಕರನ್ನು ಆಕಸ್ಮಿಕಗಳಿಂದ ರಕ್ಷಿಸಿದೆ ಮತ್ತು ೧೪,೦೦೦ಕ್ಕೂ ಹೆಚ್ಚು ಕಳ್ಳಸಾಗಣೆದಾರರನ್ನು ಹೆಡೆಮುರಿಕಟ್ಟಿ ಕಂಬಿ ಎಣಿಸುವಂತೆ ಮಾಡಿದೆ. ಭಾರತದ ಜಲಸೇನೆಯಿಂದ ವೈಸ್ ಅಡ್ಮಿರಲ್ ವಿ.ಎ. ಕಾಮತ್ ಅವರನ್ನು ಮೊದಲ ಡೈರೆಕ್ಟರ್ ಜನರಲ್ ಆಗಿ ಕರಾವಳಿ ರಕ್ಷಣಾಪಡೆಗೆ ಸೇರ್ಪಡೆ ಮಾಡಲಾಯಿತು.

೧೯೬೦ರಲ್ಲಿಯೇ ಸಮುದ್ರ ಮಾರ್ಗವಾಗಿ ನಡೆಯುವ ಕಳ್ಳ ಸಾಗಣೆ ಹೆಚ್ಚಾದಾಗ ಇದನ್ನು ತಡೆಗಟ್ಟಲು ಭಾರತದ ಜಲಪಡೆ ಕರಾವಳಿ ರಕ್ಷಣಾಪಡೆಯ ಅವಶ್ಯಕತೆಯನ್ನು ಮನಗಂಡು ಈ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿತು. ಭಾರತದ ಕಸ್ಟಮ್ಸ್ ವಿಭಾಗವು ಪದೇಪದೇ ಭಾರತದ ಜಲಪಡೆಯನ್ನು ಈ ಕಳ್ಳಸಾಗಣೆ ತಡೆಗೆ ಬಳಸಿಕೊಳ್ಳಲು ತೊಡಗಿದಾಗ ಈ ಚಟುವಟಿಕೆಯ ನಿಯಂತ್ರಣಕ್ಕಾಗಿ ಪ್ರತ್ಯೇಕ ವಿಭಾಗ ಬೇಕೆಂದು ಸಂಸತ್ತು ಮನಗಂಡಿತು. ೧೯೭೩ರಲ್ಲಿ ಭಾರತ ಈ ಪಡೆಗೆ ಬೇಕಾದ ಸಾಮಗ್ರಿಗಳನ್ನು ಮತ್ತು ಸೈನಿಕರನ್ನು ಭಾರತದ ಜಲಪಡೆಯಿಂದ ಪಡೆದುಕೊಳ್ಳತೊಡಗಿತು.

ಭಾರತದ ಜಲಪಡೆಯ ಈ ಕಾರ್ಯದಲ್ಲಿ ತೊಡಗುವುದರಿಂದ ಜಲಪಡೆಯ ಮೂಲ ಉದ್ದೇಶ ಕೆಡಬಹುದು ಎಂಬುದನ್ನು ಮನಗಂಡ ಅಂದಿನ ಜಲಪಡೆಯ ಮುಖ್ಯಸ್ಥ ಅಡ್ಮಿರಲ್ ಸೌರೇಂದ್ರನಾಥ ಕೊಹ್ಲಿ ಅವರು ಸಂಸತ್ತಿಗೆ ಪ್ರತ್ಯೇಕ ಕರಾವಳಿ ಪಡೆಯನ್ನು ನಿಯೋಜಿಸುವುದು ಒಳ್ಳೆಯದೆಂಬ ಸಲಹೆ ನೀಡಿದರು. ಹೀಗಾಗಿ ೧೯೭೪ರ ಸೆಪ್ಟೆಂಬರ್‌ನಲ್ಲಿ ಖುಸ್ರೋ ಫಾರಾಮರ‍್ಸ್ ರುಸ್ಟುಮ್‌ಜಿ ಅವರ ನೇತೃತ್ವದಲ್ಲಿ ರುಸ್ತಮ್‌ಜಿ ಕಮಿಟಿ ಮಾಡಿ ಕರಾವಳಿ ರಕ್ಷಣಾಪಡೆಗೆ ಒತ್ತನ್ನು ನೀಡಿದರು. ಅದೇ ಸಮಯದಲ್ಲಿ ಮುಂಬೈ ಹೈ ಎಂಬಲ್ಲಿ ತೈಲ ನಿಕ್ಷೇಪಗಳು ದೊರೆತು ಈ ಪಡೆಯ ಅಗತ್ಯಗಳಿಗೆ ಹೆಚ್ಚು ಒತ್ತನ್ನು ಕೊಡಲಾಯಿತು. ಹೀಗಾಗಿ ೧೯೭೭ ಫೆಬ್ರವರಿ ಒಂದರAದು ಭಾರತದ ಕೋಸ್ಟ್ ಗಾರ್ಡ್ ಪಡೆ ಅಸ್ತಿತ್ವಕ್ಕೆ ಬಂದು ಎರಡು ದೊಡ್ಡ ಬೋಟ್‌ಗಳು ಮತ್ತು ಐದು ನಿರೀಕ್ಷಕ ದೋಣಿಗಳನ್ನು ಭಾರತದ ಜಲಪಡೆಯಿಂದ ಕರಾವಳಿ ಪಡೆಗೆ ವರ್ಗಾಯಿಸಲಾಯಿತು.

ಭಾರತದ ಕರಾವಳಿ ರಕ್ಷಣಾಪಡೆಯು ವಿಶ್ವದ ಇತರ ಇಂತಹ ಪಡೆಗಳೊಂದಿಗೆ ಬೆರೆತು ಕರಾವಳಿಯಲ್ಲಿ ಕವಾಯತನ್ನು ಮಾಡುತ್ತದೆ. ೨೦೦೬ ರಲ್ಲಿ ಜಪಾನಿನ ಮತ್ತು ಕೊರಿಯಾದ ಪಡೆಗಳೊಂದಿಗೆ ಈ ಕವಾಯತನ್ನು ಮಾಡಿದೆ. ೨೦೦೮ರಲ್ಲಿ ಸಮುದ್ರದ ಮೂಲಕ ಬಂದು ಮುಂಬೈನಲ್ಲಿ ಹಲ್ಲೆಗಳು ನಡೆದಾಗ ಕರಾವಳಿ ಪಡೆಯ ಗಾತ್ರ ಮತ್ತು ಆಯುಧ ಭಂಡಾರವನ್ನು ವಿಸ್ತರಿಸುವ ಚಿಂತನೆ ಮಾಡಲಾಯಿತು. ಕನಿಷ್ಟ ೨೦೦ ಹಡಗುಗಳು ಮತ್ತು ಎರಡು ಇಂಜಿನ್ ಇರುವ ಒಂದುನೂರು ವಿಮಾನಗಳನ್ನು ಈ ಪಡೆಗೆ ೨೦೨೩ರ ಒಳಗೆ ನೀಡಲು ನಿರ್ಧರಿಸಲಾಯಿತು. ಇದೀಗ ಕರಾವಳಿ ರಕ್ಷಣಾಪಡೆಯ ೪೨ ಕೇಂದ್ರಗಳನ್ನು ಕರಾವಳಿಯ ಉದ್ದಕ್ಕೂ ರಚಿಸಲಾಗಿದ್ದು ಭಾರತಕ್ಕೆ ಕರಾವಳಿಯ ಮೂಲಕ ನಡೆಸಲಾಗುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲಾಗುತ್ತಿದೆ. ಒಟ್ಟು ೧೩,೮೪೨ ವಿವಿಧ ಶ್ರೇಣಿಯ ಕಾರ್ಯಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ದೇಶದ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಕೊಳ್ಳುತ್ತಿವೆ.

ಹೀಗೆ ಭಾರತದ ಹಣಕಾಸಿನ ಪರಿಸ್ಥಿತಿಯನ್ನು ಕೆಡಿಸಲು ಯತ್ನಿಸುವ ಕಳ್ಳಸಾಗಣೆದಾರರನ್ನು ತಡೆಯುವ ಈ ಕರಾವಳಿ ಪಡೆಗೆ ಅದರ ಹೊನ್ನಿನ ಜನ್ಮದಿನದ ಶುಭ ಹಾರೈಸಿ ನಾವು ಅವರೊಂದಿಗೆ ಇರುವುದನ್ನು ನೆನೆಪು ಮಾಡೋಣ.

- ಕಿಗ್ಗಾಲು ಎಸ್. ಗಿರೀಶ್,

ಮೂರ್ನಾಡು, ಮೊ. ೯೧೪೧೩೯೫೪೨೬.