ಮಡಿಕೇರಿ. ಫೆ. ೧ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಿಟ್ಟಿರುವ ಪ್ರತಿಷ್ಠಿತ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವೈದ್ಯರಾದ ಡಾ.ಕೆ.ಬಿ. ಸೂರ್ಯಕುಮಾರ್ ಅವರು ರಚಿಸಿದ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿಯು ಭಾಜನವಾಗಿದೆ.

ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ದ್ವಿತೀಯ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂವರು ಸಾಹಿತಿಗಳು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿದಾಗ ಅತೀ ಹೆಚ್ಚು ಅಂಕ ಪಡೆದ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿಯ ಲೇಖಕರಾದ ಡಾ. ಸೂರ್ಯಕುಮಾರ್ ಅವರಿಗೆ ಪ್ರಶಸ್ತಿ ಲಭಿಸಿದೆ.

ಡಾ ಕೆ.ಬಿ. ಸೂರ್ಯಕುಮಾರ್ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ೧೮ ವರ್ಷಗಳ ಕಾಲ ವೈದ್ಯಕೀಯ ವಿಭಾಗದಲ್ಲಿ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ ಮಾಡಿದ್ದಾರೆ. ೯೦ರ ದಶಕದಲ್ಲಿ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಇದ್ದ ಏಕೈಕ ವಿಧಿ ವಿಜ್ಞಾನ ಪರಿಣಿತರು ಇವರು. ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಡೆದ ಅಸ್ವಾಭಾವಿಕ ಮರಣಗಳಲ್ಲಿ ಸ್ಥಳ ಪರೀಕ್ಷೆ ನಡೆಸಿ ಪೊಲೀಸರಿಗೆ ಅನೇಕ ಕೊಲೆಗಳನ್ನು ಭೇದಿಸಲು ನೆರವಾಗಿದ್ದಾರೆ. ಕೊಡಗು ಸರಕಾರಿ ವೈದ್ಯರ ಸಂಘ ಮತ್ತು ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.