ಮಡಿಕೇರಿ, ಫೆ. ೧: ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವಂತಾಗಬೇಕು ಎಂದು ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮಾದಕ ವಸ್ತು ದ್ರವ್ಯ ಸಮನ್ವಯ ಕೇಂದ್ರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವಜನರು ಮಾದಕ ವಸ್ತುಗಳ ಚಟಕ್ಕೆ ತುತ್ತಾಗಿ, ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳು ಸೇರಿದಂತೆ ಎಲ್ಲೆಡೆ ಅರಿವು ಮೂಡಿಸಬೇಕು. ಈ ಬಗ್ಗೆ ಕಾರ್ಯಕ್ರಮ ಆಯೋಜಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಗ್ರ ಗಿರಿಜನ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕೃಷಿ, ತೋಟಗಾರಿಕೆ, ಪಶುಪಾಲನೆ, ಯುವ ಸಬಲೀಕರಣ, ಕಾರ್ಮಿಕ, ಹೀಗೆ ವಿವಿಧ ಇಲಾಖೆಗಳು ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಕೆಟ್ಟ ಪರಿಣಾಮ ಕುರಿತು ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ಮಾದಕ ವಸ್ತುಗಳ ಜಾಲವು ಎಲ್ಲೆಡೆ ಕೇಳಿ ಬರುತ್ತಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಗಡಿ ಭಾಗದಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕಿದೆ ಎಂದರು.
ಅಂತರರಾಜ್ಯ ಗಡಿ ಪ್ರದೇಶದ ಚೆಕ್ಪೋಸ್ಟ್ಗಳಲ್ಲಿ ವಾಹನ ಮತ್ತು ಪ್ರಯಾಣಿಕರ ತಪಾಸಣೆ ಮಾಡಬೇಕಿದೆ. ಮಾದಕ ವಸ್ತುಗಳ ಸೇವನೆ ಕಂಡುಬAದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡುವಂತಾಗಬೇಕು. ಆ ನಿಟ್ಟಿನಲ್ಲಿ ‘ಡ್ರಗ್ ಟೆಸ್ಟ್ ಕಿಟ್’ ಅನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸಲಹೆ ನೀಡಿದರು. ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ನಿತಿನ್ ಚಕ್ಕಿ ಮಾತನಾಡಿ, ಜಿಲ್ಲೆಯ ಹೋಂಸ್ಟೇಗಳಲ್ಲಿಯೂ ಸಹ ಮಾದಕ ವಸ್ತುಗಳ ಬಗ್ಗೆ ರ್ಯಾಂಡಮ್ ಆಗಿ ಪರೀಕ್ಷಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ನಶ ಮುಕ್ತ ಭಾರತ’ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಹೇಳಿದರು.
ಮಾದಕ ವಸ್ತುಗಳಿಗೆ ತುತ್ತಾದವರಿಗೆ ಪುನರ್ ವಸತಿ ಕಲ್ಪಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ವಾಹನಗಳ ತಪಾಸಣೆಗೆ ಕೈಜೋಡಿಸಲಾಗುವುದು. ಮಾದಕ ವಸ್ತುಗಳ ನಿಯಂತ್ರಣ ಸಂಬAಧ ಜಿಲ್ಲಾ ಪೊಲೀಸ್ ಇಲಾಖೆ ಜೊತೆ ಸಹಕರಿಸಲಾಗುವುದು ಎಂದರು.
ಸಹಾಯಕ ಔಷಧ ನಿಯಂತ್ರಣಾಧಿಕಾರಿ ಅಜಯ್ ರಾಜ್ ಮಾತನಾಡಿ ವೈದ್ಯರ ಸಲಹಾ ಚೀಟಿ ಇಲ್ಲದೆ ಮತ್ತುಬರುವ ಔಷಧಗಳನ್ನು ಮಾರಾಟ ಮಾಡುವುದು ಅಪರಾಧವಾಗಿದೆ. ಅಂತಹ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಕಾನೂನಿನಡಿಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವಿಜಯ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಡಿವೈಎಸ್ಪಿ ಸೂರಜ್, ಐ.ಪಿ.ಮೇದಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಪಿ.ರಾಜು, ಅಬಕಾರಿ ಉಪ ನಿರೀಕ್ಷಕರಾದ ಅಬ್ರಾಹಂ ಚೇತನ್, ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಅಧಿಕಾರಿ ಟಿ.ಆರ್.ಸುರೇಂದ್ರ ಇತರರು ಹಲವು ಮಾಹಿತಿ ನೀಡಿದರು.