ಪೊನ್ನAಪೇಟೆ, ಫೆ. ೧: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಕುಶಾಲನಗರದ ಶ್ರೀನಿವಾಸ್, ಪ್ರಸನ್ನಮಯ್ಯ ಜೋಡಿ ಪ್ರಥಮ ಸ್ಥಾನ, ಪೊನ್ನಂಪೇಟೆ ಪ್ರಸನ್ನ ವೈಲಾಯ ಮತ್ತು ಆಯುಷ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಪೊನ್ನಂಪೇಟೆಯ ಪ್ರಣಮ್ಯ ಮತ್ತು ವಂಶಿಕಾ ಜೋಡಿ ಪ್ರಥಮ ಸ್ಥಾನ, ರಜನಿ ಮತ್ತು ಆಶಿಕಾ ಭಾರದ್ವಾಜ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಪ್ರಥಮ ಸ್ಥಾನ ಪಡೆದ ಜೋಡಿಗೆ ೫ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಜೋಡಿಗೆ ೩ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.

ಕ್ರೀಡಾ ಕೂಟದಲ್ಲಿ ಪುರುಷರ ವಿಭಾಗದಲ್ಲಿ ೯ ತಂಡಗಳು, ಮಹಿಳೆಯರ ವಿಭಾಗದಲ್ಲಿ ೭ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಡೇಗೌಡ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣ ಅರ್ಚಕರಿಗಾಗಿ ಕ್ರೀಡಾಕೂಟ ಮಾಡಿರುವುದು ಉತ್ತಮ ಬೆಳವಣಿಗೆ, ಯಾವುದೇ ಒಂದು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸಲು ಕ್ರೀಡೆಯಿಂದ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘದ ಅಧ್ಯಕ್ಷ ಶಿವ ಪ್ರಸಾದ್ ಕೇಕುಣ್ಣಾಯ ಮಾತನಾಡಿ, ಕೋವಿಡ್ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘದಿAದ ಕ್ರೀಡೆಯ ಮೂಲಕ ಮತ್ತಷ್ಟು ಒಗ್ಗಟ್ಟು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಸದಸ್ಯರೇ ಹೊಂದಾಣಿಕೆ ಮೂಲಕ ತಾವೇ ಹಣ ಹಾಕಿ ಕ್ರೀಡೆ ನಡೆಸಿದ್ದು, ಖುಷಿ ತಂದಿದೆ ಎಂದರು.

ಈ ಸಂದರ್ಭ ಕಾರ್ಯದರ್ಶಿ ನಾಗೇಶ್ ಭಾರದ್ವಾಜ್, ಸದಸ್ಯರಾದ ಅಶೋಕ್ ಭಟ್, ದಯಾನಂದ, ಇನ್ನಿತರ ಸದಸ್ಯರು, ಟ್ರೋಫಿ ಪ್ರಾಯೋಜಕರಾದ ಸುಬ್ರಮಣ್ಯ ಹಳ್ಳಿಗಟ್ಟು ಇದ್ದರು.

ಶಿವಪ್ರಸಾದ್ ಕೇಕುಣ್ಣಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ಹಿರಿಯರಾದ ವಿಷ್ಣುಮೂರ್ತಿ, ಬೆಕ್ಕೆಸೊಡ್ಲೂರು ಶಾಲಾ ಶಿಕ್ಷಕ ಕೃಷ್ಣ ಇದ್ದರು. ಕ್ರೀಡಾಕೂಟವನ್ನು ಅರಣ್ಯ ಮಹಾ ವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಈಶ್ವರ್ ನಿರ್ವಹಿಸಿದರು.