ಕುಶಾಲನಗರ, ಫೆ.೨೩: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜ್ಞಾನ ಗಳಿಸಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸಿ.ಇ.ಓ ಸುಂದರ್ ರಾಮನ್ ರಾಮಮೂರ್ತಿ ಹೇಳಿದರು.
ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸಂಸ್ಥೆಯ ರೂ.೨೭ ಲಕ್ಷ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ವಿವಿಧೋದ್ದೇಶ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ವಿಶೇಷವಾಗಿ ಬಂದ ಲಾಭಾಂಶದಲ್ಲಿ ಸಾಮಾಜಿಕ ಸೇವಾಕಾರ್ಯಗಳನ್ನು ಕೈಗೊಳ್ಳುತ್ತಿದೆ. ಸರ್ಕಾರದ ಶಾಲಾ, ಕಾಲೇಜುಗಳಿಗೆ ಅನುದಾನ ನೀಡುವ ಮೂಲಕ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ. ಈ ಅವಕಾಶ ಕುಶಾಲನಗರ ಶಾಲೆಗೆ ದೊರೆತಿದ್ದು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉಜ್ವಲತೆಯನ್ನು ಕಾಣಲು ಶಿಕ್ಷಣದ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರು ಹೇಳುವ ಪ್ರತಿಯೊಂದು ಗುಣಾತ್ಮಕ ಅಂಶಗಳನ್ನು ಗೌರವದಿಂದ ಸ್ವೀಕರಿಸಿ, ದೇಶದ ಉತ್ತಮ ಪ್ರಜೆಗಳಾಗಿ ಎಂದರು. ವಿವಿಧೋದ್ದೇಶ ಸಭಾಂಗಣದ ಯೋಜನೆಗೆ ಶ್ರಮಿಸಿದ ಉದ್ಯಮಿ ಎಸ್.ಕೆ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಸವರಾಜು, ಬಿ.ಇ.ಓ ಎಂ ಕೃಷ್ಣಪ್ಪ, ಶಾಲಾ ಮುಖ್ಯ ಶಿಕ್ಷಕ ಎ.ಸಿ ಮಂಜುನಾಥ್, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೆ.ಎಸ್ ನಾಗೇಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರುತಿ, ಕಾಲೇಜು ವಿಭಾಗದ ಪ್ರಾಂಶುಪಾಲರು, ಉಪನ್ಯಾಸಕರು, ಪ್ರೌಢಶಾಲಾ ವಿಭಾಗದ ಶಿಕ್ಷಕರು, ಎನ್.ಸಿ.ಸಿ ವಿದ್ಯಾರ್ಥಿ, ಪೊಲೀಸ್ ತಂಡದ ಸದಸ್ಯರು ಪಾಲ್ಗೊಂಡಿದ್ದರು. ಶಿಕ್ಷಕಿ ಹೇಮಲತ ನಿರೂಪಿಸಿದರು.