ಸೋಮವಾರಪೇಟೆ, ಫೆ. ೨೫: ತಾಲೂಕಿನ ಗೆಜ್ಜೆಹಣಕೋಡು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಮನೆಯ ಅಂಗಳದಲ್ಲೇ ಚಿರತೆ ಓಡಾಡಿರುವ ದೃಶ್ಯಗಳು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತಂಕ ಸೃಷ್ಟಿಸಿರುವ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಸಿದೆ.

ಕಳೆದ ರಾತ್ರಿ ೮ ಗಂಟೆ ಸುಮಾರಿಗೆ ಗೆಜ್ಜೆಹಣಕೋಡು ಗ್ರಾಮದ ಉದಯ ಎಂಬವರ ಅಂಗಳದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದನ್ನು ಕಂಡ ಗೃಹಿಣಿ ವಿದ್ಯಾ ಅವರು ಬೊಬ್ಬೆ ಹೊಡೆದ ಸಂದರ್ಭ ಪೊದೆಯೊಳಗೆ ಹೋಗಿದೆ. ಚಿರತೆ ಸಾಗುವ ದೃಶ್ಯ ಮನೆಯ ಮುಂಭಾಗದಲ್ಲಿದ್ದ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ದನಕರುಗಳು ಕೊಟ್ಟಿಗೆಯಲ್ಲಿದ್ದು, ಸಾಕು ಪ್ರಾಣಿಗಳಿಗೆ ತೊಂದರೆಯಾಗಿಲ್ಲ. ಸ್ಥಳಕ್ಕೆ ಆರ್‌ಎಫ್‌ಒ ಶೈಲೇಂದ್ರ ಕುಮಾರ್, ಡಿಆರ್‌ಎಫ್‌ಒ ಪ್ರಶಾಂತ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ಗೆಜ್ಜೆಹಣಕೋಡು ಹಾಗೂ ಬೇಳೂರು ಶ್ರೀ ಮುರುಘಾರಾಜೇಂದ್ರ ಮಠದ ಅರಣ್ಯದಂಚಿನ ತೋಟದಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಲಾಗಿದೆ. ಒಂದು ತಿಂಗಳಿನಿAದ ಚಿರತೆ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಕಾರೆಕೊಪ್ಪ ಗ್ರಾಮದಲ್ಲಿ ನಾಯಿ ಮತ್ತು ಕರುವನ್ನು ಚಿರತೆ ಕಚ್ಚಿ ಗಾಯಗೊಳಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.