ಕೂಡಿಗೆ, ಫೆ. ೨೭: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಸಂಜೀವಿನಿ ಒಕ್ಕೂಟ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಕೂಡಿಗೆ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಮೂರು ದಿನಗಳ ದೂರದೃಷ್ಟಿ ಯೋಜನೆ ತರಬೇತಿ ಕಾರ್ಯಾಗಾರ ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಳಾ ನೆರವೇರಿಸಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಮತ್ತು ಒಗ್ಗೂಡಿ ಒಕ್ಕೂಟದ ಮುಖೇನ ಸಾಲ ಸೌಲಭ್ಯಗಳನ್ನು ಪಡೆದು ತಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಲು ವಿವಿಧ ಹಂತಗಳಲ್ಲಿ ತರಬೇತಿಯನ್ನು ಪಡೆದು ಮುಂದುವರೆಯಲು ಇಂತಹ ತರಬೇತಿ ಕಾರ್ಯಾಗಾರ ಉಪಯುಕ್ತವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ವ್ಯವಸ್ಥಾಪಕ ಜಯಚಂದ್ರನ್, ಸಂಪನ್ಮೂಲ ವ್ಯಕ್ತಿ ಮಡಿಕೇರಿ ಸುಜಾತ, ಮೇಲ್ವಿಚಾರಕಿ ಪದ್ಮಶ್ರೀ, ಕೂಡಿಗೆ ಒಕ್ಕೂಟದ ಅಧ್ಯಕ್ಷೆ ಕಲ್ಪನಾ, ಸದಸ್ಯರಾದ ರತ್ನಮ್ಮ, ಸೌಮ್ಯ, ಬೇಬಿ, ಸೇರಿದಂತೆ ೨೦ಕ್ಕೂ ಹೆಚ್ಚು ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.