ಕರಿಕೆ, ಫೆ. ೨೭: ಇಲ್ಲಿಗೆ ಸಮೀಪದ ಕರಿಕೆ ಮಂಜನಡ್ಕ ತುಳುರ್ ವನದ ಭಗವತಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಎಂಟು ದಿನಗಳಿಂದ ನಡೆದ ಜಾತ್ರೆಯಲ್ಲಿ ಕೇರಳ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಟೂರ್ ಮನೆತನದ ಆಡಳಿತಕ್ಕೊಳಪಟ್ಟ ಕ್ಷೇತ್ರದಲ್ಲಿ ನೂರ ಒಂದು ದೈವಗಳ ಕೋಲ ನಡೆಯುತ್ತಿದ್ದು, ಪ್ರಮುಖವಾಗಿ ಹುಲಿ ದೈವ, ಮುನ್ನಯರ್, ಈಶ್ವರ್, ಕ್ಷೇತ್ರ ಪಾಲ, ಭಗವತಿ ತೆರೆಗಳು ನಡೆದವು.
ಕೇರಳದ ಸೇವಾಭಾರತಿ ವತಿಯಿಂದ ನಿತ್ಯ ಮಧ್ಯಾಹ್ನ, ರಾತ್ರಿ ಅನ್ನದಾನ ಸೇವೆ ನಡೆಯಿತು.ಕರಿಕೆಯ ಸ್ವಯಂ ಸೇವಕರು ಕೂಡ ಅನ್ನದಾನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಸರಗೋಡು ಸಂಸದ ಉಣ್ಣನಿತಾಯನ್, ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.